ಮನೆ ರಾಜಕೀಯ ಹಿಂದು ಪದ ಕುರಿತ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ: ಸಿಎಂಗೆ ಪತ್ರ

ಹಿಂದು ಪದ ಕುರಿತ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ: ಸಿಎಂಗೆ ಪತ್ರ

0

ಬೆಳಗಾವಿ: ‘ಹಿಂದೂ ಪದಕ್ಕೆ ಅಶ್ಲೀಲ ಅರ್ಥಗಳಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ನೀಡಿದ ಹೇಳಿಕೆಯನ್ನು ಹಿಂಪಡೆದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಪತ್ರ ಬರೆದಿದ್ದಾರೆ.

‘ಹಿಂದೂ ಪದದ ಕುರಿತು ನಾನು ನೀಡಿದ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಆಗಬಾರದು ಎಂದು ಹೇಳಿಕೆ ಹಿಂಪಡೆದಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿವೆ. ನನ್ನ ತೇಜೋವಧೆ ಮಾಡುವ ವ್ಯವಸ್ಥಿತಿ ಪಿತೂರಿ ನಡೆದಿದೆ. ಈ ಎಲ್ಲ ಅಂಶಗಳ ಕುರಿತು ಪರಿಶೀಲಿಸಬೇಕು. ನೈಜ ಸ್ಥಿತಿ ವಿವರಿಸದೇ, ಅವಾಂತರ ಸೃಷ್ಟಿಸಿದವರ ವಿರುದ್ಧ ತನಿಖೆಗಾಗಿ ಸಮಿತಿ ರಚಿಸಬೇಕು ಎಂದೂ ವಿನಂತಿಸಿದ್ದಾರೆ.

ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಪದದ ಬಗ್ಗೆ ಕೆಟ್ಟ ಅರ್ಥಗಳಿವೆ ಎಂಬುದಾಗಿ ಬರೆದಿದ್ದಾರೆ ಎಂದು ನಾನು ಹೇಳಿಕೆ ನೀಡಿದ್ದೇನೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕಾದುದು ಅವಶ್ಯ ಎಂದು ಹೇಳಿದ್ದೇನೆ. ವಿಕಿಪೀಡಿಯಾ, ಪುಸ್ತಕಗಳು, ಶಬ್ದಕೋಶಗಳು ಹಾಗೂ ಇತಿಹಾಸಕಾರರ ಬರಹದ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧರಿತವಾಗಿದೆ ಎಂದು ವಿವರಿಸಿದ್ದಾರೆ.

ನಿಪ್ಪಾಣಿಯಲ್ಲಿ ನ.6ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಈ ವಿಷಯ ಪ್ರಸ್ತಾಪಿಸಿದ್ದರು. ಇದನ್ನು ಖಂಡಿಸಿ ಬುಧವಾರ ರಾಜ್ಯದ ಎಲ್ಲೆಡೆ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಯಿತು.