ಮುಂಬೈ(Mumbai): ಪಿಕ್’ನಿಕ್ ಮುಗಿಸಿ ಮರಳುತ್ತಿದ್ದ ಶಾಲಾ ಬಸ್’ವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖೊಪೊಲಿ ಪಟ್ಟಣದ ಪರ್ವತ ಪ್ರದೇಶದಲ್ಲಿ ನಡೆದಿದೆ.
ಬ್ರೇಕ್ ವೈಫಲ್ಯದಿಂದಾಗಿ ಚಾಲಕ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಲೋನವಾಲ ಗಿರಿಧಾಮದಿಂದ 14 ಕಿ.ಮೀ ದೂರದ ಹಳೆ ಮುಂಬೈ–ಪುಣೆ ಹೆದ್ದಾರಿಯಲ್ಲಿ ಮ್ಯಾಜಿಕ್ ಪಾಯಿಂಟ್ ಹಿಲ್ ಸಮೀಪ ರಾತ್ರಿ 8ರ ಸುಮಾರಿಗೆ ಈ ಘಟನೆ ನಡೆದಿದೆ.
ಮುಂಬೈ ಸಬ್–ಅರ್ಬನ್ ಪ್ರದೇಶದ ಚೆಂಬೂರಿನ ಕೋಚಿಂಗ್ ಕ್ಲಾಸ್’ವೊಂದರ ಸುಮಾರು 49 ವಿದ್ಯಾರ್ಥಿಗಳು ಖಾಸಗಿ ಬಸ್’ನಲ್ಲಿ ಪಿಕ್’ನಿಕ್’ಗೆ ತೆರಳಿದ್ದರು. ವಿದ್ಯಾರ್ಥಿಗಳೆಲ್ಲರೂ 10ನೇ ತರಗತಿಯವರು ಎಂದು ತಿಳಿದು ಬಂದಿದೆ.
ಲೋನವಾಲದಲ್ಲಿ ಪಿಕ್’ನಿಕ್ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ, ಬ್ರೇಕ್ ವೈಫಲ್ಯದಿಂದಾಗಿ ಖೊಪೊಲಿ ಬಳಿಯ ಘಾಟಿಯಲ್ಲಿ (ಗುಡ್ಡಗಾಡು ರಸ್ತೆ) ಬಸ್ ಚಾಲಕನು ವಾಹನದ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು.
ಅಪಘಾತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಾಲಕನಿಗೆ ಗಾಯಗಳಾಗಿವೆ, ಅವರನ್ನು ಲೋನವಾಲ ಮತ್ತು ಖೊಪೊಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 17 ಮತ್ತು 16 ವರ್ಷದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.