ಮೈಸೂರು(Mysuru): ಎಟಿಎಂಇ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಎಸ್‌ವಿಇಐ ಸಂಯುಕ್ತ ಪಿಯು ಕಾಲೇಜಿನಲ್ಲಿ ಸೆ.5ರಿಂದ 7ರವರೆಗೆ ‘ವಿದ್ಯಾರ್ಥಿಗಳಿಗೆ ವಿಜ್ಞಾನ ಉತ್ಸವ’ (ಸೈನ್ಸ್ ಫಿಯೆಸ್ಟಾ ಫಾರ್ ಸ್ಟುಡೆಂಟ್ಸ್) ಆಯೋಜಿಸಲಾಗಿದೆ ಎಂದು ಎಟಿಎಂಇ ಪ್ರಾಂಶುಪಾಲ ಡಾ.ಎಲ್.ಬಸವರಾಜ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಲ್.ಯತೀಶ್ ಹಾಗೂ ಸಹಾಯಕ ಪ್ರಾಧ್ಯಾಪಕ ಗುರುಪ್ರಸಾದ್ ಕೆ.ಎನ್. ಸಿದ್ಧಪಡಿಸಿದ್ದ ಯೋಜನೆಯನ್ನು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಅನುಮೋದಿಸಿದ್ದು, ₹ 17.90 ಲಕ್ಷ ಅನುದಾನ ಮಂಜೂರು ಮಾಡಿದೆ ಎಂದರು.
ಇದರಲ್ಲಿ ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. 7ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೌಶಲ ಅಭಿವೃದ್ಧಿ ಹಾಗೂ ಸಂಶೋಧನೆ ಬಗ್ಗೆ ಆಸಕ್ತಿ ಬೆಳೆಸಲು ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದರು.
ಸೆ.5ರಂದು ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರವರೆಗೆ ಪ್ರಬಂಧ ರಚನೆ, ಆಶುಭಾಷಣ ಸ್ಪರ್ಧೆ ಹಾಗೂ ಭಿತ್ತಿಪತ್ರ ಪ್ರದರ್ಶನ ನಡೆಯಲಿದೆ. ಸೆ.6ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3ರವರೆಗೆ ಹ್ಯಾಕಥಾನ್ ಮತ್ತು ರಸಪ್ರಶ್ನೆ ಸ್ಪರ್ಧೆ ಇರಲಿದೆ. ಸೆ.7ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ವಿವಿಧ ತಾಂತ್ರಿಕ ಯೋಜನೆಗಳ ಪ್ರದರ್ಶನ ಸ್ಪರ್ಧೆ ಜರುಗಲಿದೆ. ವಿಜೇತರಿಗೆ ವಿನ್ನರ್ಸ್ ಹಾಗೂ ರನ್ನರ್ ಅಪ್‌ಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ 7ರಿಂದ 12ನೇ ತರಗತಿಯ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ಶಾಲೆ–ಕಾಲೇಜಿನಿಂದ 24 ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ. www.atme.in ಜಾಲತಾಣದಲ್ಲಿ ಲಾಗ್‌ಇನ್ ಆಗಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:9902238768 ಸಂಪರ್ಕಿಸಬಹುದು ಎಂದು ವಿವರ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಡಾ.ಕೆ.ಎಲ್.ಸಚ್ಚಿದಾನಂದಮೂರ್ತಿ, ಯೋಜನೆ ಅನುಷ್ಠಾನ ಸಂಯೋಜಕ ಡಾ.ಎಲ್.ಯತೀಶ್, ಇ ಅಂಡ್ ಇ ವಿಭಾಗದ ಮುಖ್ಯಸ್ಥ ಪಿ.ಕೆ.ಮಹೇಶ್, ಎಸ್‌ವಿಇಐ ವಾಣಿಜ್ಯ ವಿಭಾಗದ ಮುಖ್ಯಸ್ಥ ರವಿಕಿರಣ್, ಪ್ರೊ.ಕೆ.ಎನ್.ಗುರುಪ್ರಸಾದ್ ಇದ್ದರು.