ಮೈಸೂರು : ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮತ್ತು ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರಿಗೆ ಶಾಲಾಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ. ಪಾಲ್ಗೊಳ್ಳುವಿಕೆ ಮತ್ತು ಶಾಲಾಭಿವೃದ್ಧಿ ಯೋಜನೆ ಕುರಿತು ತರಬೇತಿಯನ್ನು ಹೋಟೆಲ್ ಗೋವರ್ಧನ ಇಲ್ಲಿ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜವರೇಗೌಡ, ಪ್ರತಿ ಶಾಲೆಯ ಅಭಿವೃದ್ಧಿಗೆ ಸ್ಥಳೀಯ ಮಟ್ಟದಲ್ಲಿ ಎಸ್.ಡಿ.ಎಂ.ಸಿ. ಪಾತ್ರ ತುಂಬಾ ಪ್ರಮುಖವಾಗಿದೆ. ನೀವೆಲ್ಲರೂ ಕೂಡ ಅವರ ಸಹಾಯವನ್ನು ಪಡೆಯಬೇಕು ಮತ್ತು ಇಂದಿನ ತರಬೇತಿಯ ಸದುಪಯೋಗ ಪಡೆದುಕೊಳ್ಳಿರಿ. ನಾನು ಮುಂದಿನ ದಿನದಲ್ಲಿ ಅನುಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶಿಕ್ಷಣ ತಜ್ಞರು ಡಾ. ನಿರಂಜನಾರಾಧ್ಯ ವಿ.ಪಿ, ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪ್ರಕಾರ್ಯಗಳು ಮತ್ತು ಶಾಲಾಭಿವೃದ್ಧಿ ಯೋಜನೆ, ಸ್ಥಳೀಯ ಸರ್ಕಾರಗಳ ಪಾಲ್ಗೊಳ್ಳುವಿಕೆ, ಪಠ್ಯಕ್ರಮ ಮತ್ತು ಗುಣಾತ್ಮಕ ಕಲಿಕೆ, ಮಕ್ಕಳ ಜ್ಞಾನ ಸಾಮರ್ಥ್ಯ ಮತ್ತು ಪ್ರತಿಭೆಯ ವರ್ದನೆ, ಮಕ್ಕಳ ಸ್ನೇಹಿ ಶಾಲಾ ವಾತಾವರಣ ನಿರ್ಮಾಣ ಮಾಡುವುದು ವಿಚಾರಗಳ ಕುರಿತು ತಿಳಿಸಿದರು.

ಕಾರ್ಯಕ್ರಮದ ಕುರಿತು ಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಸೂರು ತಾಲೂಕು ವಲಯ ರವರು ಮಾತನಾಡಿ ಆರ್ ಎಲ್ ಎಚ್ ಪಿ ಸಂಸ್ಥೆ ಸಮುದಾಯಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಟೆಂಟ್ ಶಾಲೆಗಳನ್ನು ನಿರ್ಮಿಸಿ ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ತರಬೇತಿಯಿಂದ ನಮ್ಮ ಶಾಲೆಗಳಲ್ಲಿ ಎಸ್ ಡಿ ಎಂ ಸಿ ಮತ್ತು ಶಾಲೆಯ ಶಿಕ್ಷಕರು ಸಭೆ ಮಾಡಿ ಪರಿಣಾಮಕಾರಿಯಾಗಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕಿದೆ ಎಂದು ತಿಳಿಸಿದರು.
ತರಬೇತಿಯಲ್ಲಿ ಸರಸ್ವತಿ ನಿರ್ದೇಶಕರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.














