ಮನೆ ಕಾನೂನು ಎರಡನೇ ಡಿಜಿಟಲ್ ಲೋಕ ಅದಾಲತ್: ಕನಿಷ್ಠ 1 ಕೋಟಿ ಪ್ರಕರಣಗಳ ವಿಚಾರಣೆ ಸಾಧ್ಯತೆ

ಎರಡನೇ ಡಿಜಿಟಲ್ ಲೋಕ ಅದಾಲತ್: ಕನಿಷ್ಠ 1 ಕೋಟಿ ಪ್ರಕರಣಗಳ ವಿಚಾರಣೆ ಸಾಧ್ಯತೆ

0

ನವೆಂಬರ್ 12 ರಂದು ನಡೆಯಲಿರುವ ಎರಡನೇ ರಾಷ್ಟ್ರೀಯ ಡಿಜಿಟಲ್ ಲೋಕ ಅದಾಲತ್ ಒಂದು ಕೋಟಿಗೂ ಹೆಚ್ಚು ಪ್ರಕರಣಗಳ ವಿಚಾರಣೆಗೆ ಸಜ್ಜಾಗಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಇದುವರೆಗೆ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು ಚಲನ್ಗಳು ಸೇರಿದಂತೆ 80 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇತರ ನೋಂದಾಯಿತ ಪ್ರಕರಣಗಳಲ್ಲಿ ಹಣ ವಸೂಲಾತಿ, ವಿದ್ಯುತ್ ಬಿಲ್ಗಳು ಮತ್ತು ಇತರ ಬಿಲ್ ಪಾವತಿ, ದೂರಸಂಪರ್ಕ ವಿವಾದ ಹಾಗೂ ಬ್ಯಾಂಕ್ಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿವೆ. ಈ ಹಿಂದೆ ಆಗಸ್ಟ್ನಲ್ಲಿ ನಡೆದ ಡಿಜಿಟಲ್ ಲೋಕ ಅದಾಲತ್ ₹833,513,857ಯಷ್ಟು ಮೊತ್ತದ ವ್ಯಾಜ್ಯ ಪರಿಹರಿಸಲು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿತ್ತು. ಈ ಬಾರಿ ಈ ಮೊತ್ತ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ರಾಜಸ್ಥಾನ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಗುಪ್ತಾ ಮಾತನಾಡಿ, ಇಂತಹ ಡಿಜಿಟಲ್ ಅದಾಲತ್’ಗಳ ಮೂಲಕ ಮಿತವ್ಯಯದ ಮತ್ತು ಸಕಾಲಿಕ ವ್ಯಾಜ್ಯ ಪರಿಹಾರ ವಿಧಾನ ಒದಗಿಸುವ ತನ್ನ ಉದ್ದೇಶವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ  ಜಾರಿಗೆ ತಂದ ಬಗೆಯನ್ನು ವಿವರಿಸಿದರು.

ಪ್ರಥಮ ಡಿಜಿಟಲ್ ಲೋಕ ಅದಾಲತ್ನಲ್ಲಿ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 568 ಪೀಠಗಳನ್ನು ಸ್ಥಾಪಿಸಿ 13,54,432 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅವುಗಳಲ್ಲಿ 11,16,193 ಅರ್ಜಿಗಳನ್ನು ವ್ಯಾಜ್ಯ ಪೂರ್ವ ಹಂತದಲ್ಲಿಯೇ ಬಗೆಹರಿಸಲಾಗಿತ್ತು. ಮಹಾರಾಷ್ಟ್ರವೊಂದರಲ್ಲೇ 63, 99,983 ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ 58,10,712 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಭಾರತೀಯ ಕಂಪನಿ ಜುಪಿಟೈಸ್ ಡಿಜಿಟಲ್ ಲೋಕ ಅದಾಲತ್ಗಳನ್ನು ನಡೆಸುವ ನ್ಯಾಯ ತಂತ್ರಜ್ಞಾನ ವೇದಿಕೆಯನ್ನು ರೂಪಿಸಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮಣ್ ಅಗರ್ವಾಲ್ ಹೇಳಿದರು.