ಮನೆ ಕಾನೂನು ಮೊದಲ ಮದುವೆ ಕಾನೂನುಬದ್ಧವಾಗಿ ಮುರಿದುಕೊಳ್ಳದಿದ್ದರೂ ಮಹಿಳೆಗೆ ಎರಡನೇ ಪತಿ ಜೀವನಾಂಶ ಪಾವತಿಸಬೇಕು: ಸುಪ್ರೀಂ

ಮೊದಲ ಮದುವೆ ಕಾನೂನುಬದ್ಧವಾಗಿ ಮುರಿದುಕೊಳ್ಳದಿದ್ದರೂ ಮಹಿಳೆಗೆ ಎರಡನೇ ಪತಿ ಜೀವನಾಂಶ ಪಾವತಿಸಬೇಕು: ಸುಪ್ರೀಂ

0

ನವದೆಹಲಿ: ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿ ಮಹಿಳೆಗೆ ಜೀವನಾಂಶ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್‌, ಮಹಿಳೆಯು ತನ್ನ ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಮುರಿದುಕೊಳ್ಳದೇ ಇದ್ದರೂ ಸಹ, ಎರಡನೇ ಗಂಡನಿಂದ ಜೀವನಾಂಶವನ್ನು ಪಡೆಯಬಹುದು ಎಂದು ವ್ಯಾಖ್ಯಾನಿಸಿದೆ.

Join Our Whatsapp Group

ಸರ್ವೋಚ್ಚ ನ್ಯಾಯಾಲಯದ ತೀರ್ಪು: ತೆಲಂಗಾಣದ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ತಮಗೆ 2ನೇ ಪತಿ ಜೀವನಾಂಶ ನೀಡಬೇಕೆಂದು ಕೋರಿ ಹೈದರಾಬಾದ್​ನ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ ಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಹೈದರಾಬಾದ್​ನ ಮಹಿಳೆಯು 1999 ರಲ್ಲಿ ಮೊದಲ ವಿವಾಹವಾಗಿದ್ದು, 2005 ರಲ್ಲಿ ಅವರು ಪರಸ್ಪರ ಒಪ್ಪಂದದಿಂದ ಬೇರೆ ಬೇರೆಯಾಗಿ ವಾಸಿಸುವ ಮೂಲಕ ಮೊದಲ ವಿವಾಹವನ್ನು ಕೊನೆಗೊಳಿಸಿದ್ದರು. ಔಪಚಾರಿಕ ಕಾನೂನು ವಿಚ್ಛೇದನವನ್ನು ಪಡೆಯದ ಮಹಿಳೆಯು 2006ರಲ್ಲಿ ಎರಡನೇ ವಿವಾಹವಾಗಿದ್ದು, 2008 ರಲ್ಲಿ ಮಗುವನ್ನು ಹೊಂದಿದರು. ಆದರೆ, ಕೆಲವು ತಿಂಗಳ ನಂತರ ಹೊಂದಾಣಿಕೆ ಆಗದ್ದರಿಂದ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಮಹಿಳೆಯು 2ನೇ ಪತಿ ವಿರುದ್ಧ ಸೆಕ್ಷನ್ 498A ಅಡಿ ಪ್ರಕರಣ ದಾಖಲಿಸಿದ್ದು, 2012 ರಲ್ಲಿ, ಜೀವನಾಂಶಕ್ಕಾಗಿ ಹೈದರಾಬಾದ್​ನ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

ಕಾನೂನು ಹೋರಾಟ: ಮಹಿಳೆ ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಆಕೆಯ ಪರವಾಗಿ ತೀರ್ಪು ನೀಡಿ, ತಿಂಗಳಿಗೆ ₹3,500 ಮತ್ತು ಅವರ ಮಗುವಿಗೆ ₹5,000 ಪಾವತಿಸುವಂತೆ ನಿರ್ದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಪ್ರತಿವಾದಿಯಾದ ಮಹಿಳೆಯ 2ನೇ ಪತಿಯು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಹಿಳೆಯು ಮೊದಲ ಮದುವೆ ಈವರೆಗೂ ಕಾನೂನುಬದ್ಧವಾಗಿ ವಿಸರ್ಜಿಸಲ್ಪಟ್ಟಿಲ್ಲವಾದ್ದರಿಂದ, ಅವರು ಜೀವನಾಂಶಕ್ಕೆ ಅರ್ಹರಲ್ಲ ಎಂದು ವಾದಿಸಿದ್ದರು. ವಾದ ಆಲಿಸಿದ್ದ ಹೈಕೋರ್ಟ್‌, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಮಗುವಿಗೆ ಜೀವನಾಂಶ ಆದೇಶವನ್ನು ಎತ್ತಿಹಿಡಿದಿತ್ತು. ಅಲ್ಲದೇ ಆಕೆ ಮೊದಲ ಮದುವೆಯನ್ನು ಕಾನೂನು ತೀರ್ಪಿನ ಮೂಲಕ (ವಿಚ್ಛೇದನ) ಮುರಿದುಕೊಂಡಿಲ್ಲ. ಹೀಗಾಗಿ, ಮಹಿಳೆಯನ್ನು ಅರ್ಜಿದಾರನ ಕಾನೂನುಬದ್ದ ಪತ್ನಿ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿತ್ತು. ಜೀವನಾಂಶ ನೀಡುವುದನ್ನು ರದ್ದುಗೊಳಿಸಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪು: ಹೈಕೋರ್ಟ್‌ನ ತೀರ್ಪಿನಿಂದ ಅತೃಪ್ತರಾದ ಮಹಿಳೆಯು, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಮೇಲ್ಮನವಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌, ಮಹಿಳೆ ಕಾನೂನುಬದ್ಧವಾಗಿ ಮೊದಲ ಪತಿಯಿಂದ ದೂರವಾಗದೇ ಇದ್ದರೂ, ಆಕೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು. ಸಿಆರ್‌ಪಿಸಿ 125ರ ಅಡಿಯಲ್ಲಿ ಜೀವನಾಂಶ ಎಂಬುದು ಸಾಮಾಜಿಕ ನ್ಯಾಯದ ಉದ್ದೇಶವನ್ನು ಹೊಂದಿದೆ. ನಾವು ಆತ್ಮಸಾಕ್ಷಿಯಿಂದ ಗಮನಿಸಿದಾಗ ಮೇಲ್ಮನವಿದಾರರಿಗೆ (ಮಹಿಳೆ) ಜೀವನಾಂಶವನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಮಾಜಿಕ ಕಲ್ಯಾಣ ನಿಬಂಧನೆಗಳನ್ನು ವಿಸ್ತಾರವಾದ ಮತ್ತು ಫಲಕಾರಿ ಉದ್ದೇಶಕ್ಕಾಗಿ ಒಳಪಡಿಸಬೇಕು ಎಂಬುದು ಕಾನೂನಿನ ಆಶಯವಾಗಿದೆ.

ಪ್ರತಿವಾದಿಯು ಮಹಿಳೆಯ ಪರಿಸ್ಥಿತಿಯನ್ನು ತಿಳಿದುಕೊಂಡು ಆಕೆಯನ್ನು ಮದುವೆಯಾಗಿದ್ದಲ್ಲದೇ, ಆಕೆಯ ಒಡನಾಟವನ್ನು ಆನಂದಿಸಿದ್ದಾನೆ. ತನ್ನ ಜವಾಬ್ದಾರಿಗಳನ್ನು ಪೂರೈಸುವ ಸರದಿ ಬಂದಾಗ, ಈ ರೀತಿ ತಪ್ಪಿಸಿಕೊಳ್ಳುವ ಪ್ರಯತ್ನ ಸರಿ ಅಲ್ಲ. ಮಹಿಳೆ ಎರಡೂ ಮದುವೆಗಳಿಂದ ಜೀವನಾಂಶವನ್ನು ಕೋರಿದ್ದರೆ, ತಪ್ಪು ಎನ್ನಬಹುದು. ಮಹಿಳೆಯು ಮೊದಲನೇ ಪತಿಯಿಂದ ಜೀವನಾಂಶ ಪಡೆಯುತ್ತಿಲ್ಲ ಎಂಬುದನ್ನು ಗಮನಿಸಬೇಕು. ಮಹಿಳೆಯ ಮೊದಲ ವಿವಾಹ ಸಂಬಂಧವನ್ನು ಕಾನೂನುಬದ್ಧವಾಗಿ ಮುರಿದುಕೊಂಡಿಲ್ಲ ಎಂಬ ಕಾರಣಕ್ಕೆ ಪ್ರತಿವಾದಿಯು ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ಅಭಿಪ್ರಾಯ ಪಟ್ಟಿದೆ.