ಬೆಂಗಳೂರು: ಐಪಿಎಲ್‌ನಲ್ಲಿ ಮೊದಲ ಬಾರಿಗೆ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂದು ಬೆಂಗಳೂರಿಗೆ ಆಗಮಿಸಿದ್ದು, ಸಂಜೆ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಆದರೆ ಆರಂಭದಲ್ಲಿ ನಿರೀಕ್ಷಿತವಾಗಿದ್ದಂತೆ ತೆರೆದ ವಾಹನದಲ್ಲಿ ವಿಜಯ ಮೆರವಣಿಗೆ ಇರುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
“ಆರ್‌ಸಿಬಿ ಆಟಗಾರರ ಮೆರುಗು ಪ್ರದರ್ಶನಕ್ಕೆ ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಆದರೆ ಭದ್ರತೆ ಪ್ರಮುಖ. ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ತೆರೆದ ವಾಹನ ಮೆರವಣಿಗೆ ಕೈಬಿಡಲಾಗಿದೆ” ಎಂದು ಗೃಹ ಸಚಿವ ಜಿ. ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಥಳದಲ್ಲೇ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ವಿಕ್ಟರಿ ಪರೇಡ್‌ಗೆ ಲಕ್ಷಾಂತರ ಜನರು ಸೇರುವುದರಿಂದ ನಿರ್ವಹಣೆ ಕಷ್ಟ. ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿವೆ. ಆದ್ದರಿಂದ ಸೂಕ್ತ ಭದ್ರತೆ ಕಷ್ಟ ಎಂದು ಪೊಲೀಸ್ ಇಲಾಖೆ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್‌ಸಿಬಿ ತಂಡದ ಪರವಾಗಿ ಒಬ್ಬ ಪ್ರತಿನಿಧಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.















