ಮೈಸೂರು(Mysuru): ಯಾವುದೇ ಪರವಾನಿಗೆ ಹಾಗೂ ಮೂಲ ಸೌಕರ್ಯಗಳಿಲ್ಲದೇ ಆರ್’ಟಿಓ ನಿಯಮಗಳನ್ನು ಉಲ್ಲಂಘನೆ ಮಾಡಿ ಸೆಂಟ್ ಲಾರೆನ್ಸ್ ವಿದ್ಯಾಸಂಸ್ಥೆಯ ಎರಡು ಬಸ್ ಗಳು ಸಂಚರಿಸುತ್ತಿರುವ ಕುರಿತು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ನೀಡಿದ ದೂರಿನ ಮೇರೆಗೆ ಇಂದು (ಮಂಗಳವಾರ) ಸಂಜೆ ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರು ಎರಡು ಬಸ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರಾದ ಶಿವಸ್ವಾಮಿಯವರು ಸಂಸ್ಥೆಯ ಸದಸ್ಯರ ಸಹಾಯದಿಂದ ಬಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಹ್ಯಾಪಿನೆಸ್ ಇನ್ ಟ್ರಾನ್ಸಿಟ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬೋರ್ಡ್ ಇರುವ ಸೆಂಟ್ ಲಾರೆನ್ಸ್ ವಿದ್ಯಾಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ AP-09/TA9193 ಮತ್ತು AP-09/TA9196 ಬಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಾಹನಗಳ ಬಗ್ಗೆ ಆರ್’ಟಿಓ ಇಲಾಖೆಯಲ್ಲಿ ಪರಿಶೀಲಿಸಿದಾಗ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಅಲ್ಲದೇ ಸುಪ್ರೀಂಕೋರ್ಟ್ ಆದೇಶದಂತೆ ಹಾಗೂ ಆರ್’ಟಿಓ ನಿಯಮಾವಳಿಯಂತೆ ವಾಹನವು 40 ಕಿಮೀ ಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸಲು ಅವಕಾಶವಿಲ್ಲದಿದ್ದರೂ, ವಾಹನವನು ಅತಿ ಹೆಚ್ಚು ವೇಗದಲ್ಲಿ ಸಂಚರಿಸುತ್ತಿದೆ.
ಈ ಎರಡು ವಾಹನಗಳ ನೋಂದಾಯಿತ ಪ್ರಮಾಣಪತ್ರ, ವಿಮೆ ಫಿಟ್ನೆಸ್ ಪ್ರಮಾಣಪತ್ರ, ಮಾಲಿನ್ಯ ಪ್ರಮಾಣಪತ್ರ, ಸ್ಪೀಡ್ ಗವರ್ನರ್ ಪ್ರಮಾಣ ಪತ್ರ, ಶಾಲಾ ಬಸ್ ಪರವಾನಗಿ ಪ್ರಮಾಣಪತ್ರಗಳನ್ನು ಸದರಿ ಶಾಲೆಯವರು ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸದರಿ ವಾಹನಗಳ ಚಾಲಕರು ಚಾಲನಾ ಪ್ರಮಾಣಪತ್ರ, ಶಾಲಾ ವಾಹನದಲ್ಲಿರುವ ಸುರಕ್ಷತೆಯ ಸಾಧನಗಳನ್ನು ಹೊಂದಿರದೇ ಅಮಾಯಕ ಎಳೆಯ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸೆಂಟ್ ಲಾರೆನ್ಸ್ ವಿದ್ಯಾಸಂಸ್ಥೆಯ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ಸಂಸ್ಥೆಯ ಸದಸ್ಯರು ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಹಲವಾರು ಶಾಲೆಗಳಿಗೆ ಈ ಕಂಪನಿಯು ಬಸ್ ಸೌಕರ್ಯವನ್ನು ಒದಗಿಸಿದ್ದು, ಸದರಿ ಕಂಪನಿಯ ಇನ್ನೂ ಹಲವಾರು ಬಸ್’ಗಳು ಸಂಚರಿಸುತ್ತಿರುವ ಅನುಮಾನವಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.