ಮನೆ ರಾಜ್ಯ ದಸರಾ ಉದ್ಘಾಟನೆಗೆ ಆಯ್ಕೆ: ಕನ್ನಡದ ಉಳಿವಿಗೆ, ಶಾಂತಿಮಂತ್ರವನ್ನು ಜಗತ್ತಿಗೆ ಸಾರಲು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ ಎಂದ ಹಂಸಲೇಖ

ದಸರಾ ಉದ್ಘಾಟನೆಗೆ ಆಯ್ಕೆ: ಕನ್ನಡದ ಉಳಿವಿಗೆ, ಶಾಂತಿಮಂತ್ರವನ್ನು ಜಗತ್ತಿಗೆ ಸಾರಲು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ ಎಂದ ಹಂಸಲೇಖ

0

ಬೆಂಗಳೂರು: ದಸರಾ ಎಂಬುದು ದೊಡ್ಡ ಸಂಭ್ರಮ. ಅಂಥ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್​ ಫೈಟರ್​ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಈ ಸಂದರ್ಭವನ್ನು ಕನ್ನಡದ ಉಳಿವಿಗೆ, ಶಾಂತಿಮಂತ್ರವನ್ನು ಜಗತ್ತಿಗೆ ಸಾರಲು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ ಎಂದು ಸಂಗೀತ ನಿರ್ದೇಶಕ, ಗೀತರಚನಾಕಾರ ಹಂಸಲೇಖ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶೀಸಿ ಮಾತನಾಡಿದ ಅವರು, ಇದು ನಾಲ್ವಡಿ ಕೃಷ್ಣರಾಜ ಒಡೆಯರ ಕನಸು. ಜಗತ್ತು ಕಂಡ ಅತ್ಯಂತ ಶ್ರೀಮಂತ ರಾಜ ಅವರು. ನನಗೆ ಈಗ ಸಂತೋಷವನ್ನೂ ತಡೆದುಕೊಳ್ಳುವ ವಯಸ್ಸು. ಅದಕ್ಕೂ ಒಂದು ನಿಯಂತ್ರಣ ಬೇಕು. 35 ವರ್ಷದ ಹಿಂದೆ ಆಗಿದ್ದರೆ ನಾನು ಏನೇನೋ ಮಾತನಾಡುತ್ತಿದ್ದೆ. ಮೊದಲು ನಾವು ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ ತಿಳಿಸಬೇಕು ಎಂದರು.

ನಮ್ಮ ನಾಡಿನಲ್ಲಿ ಒಕ್ಕೂಟ ವ್ಯವಸ್ಥೆ ಬರುವುಕ್ಕೂ ಮುನ್ನ, ಸಂವಿಧಾನ ಸಿದ್ಧವಾಗುವುದಕ್ಕೂ ಮುನ್ನ, ಸಂವಿಧಾನದಲ್ಲಿ ಏನೆಲ್ಲ ಇರಬೇಕು ಎಂಬುದನ್ನು ಆಲೋಚಿಸುವುದಕ್ಕೂ ಮುನ್ನ ಅದನ್ನೆಲ್ಲ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ಇಲ್ಲಿ ಜಾರಿಗೊಳಿಸಿದ್ದರು. ಅವರು ಒಂದು ಪ್ರಜಾ ಪ್ರತಿನಿಧಿ ಸಭೆ ಎಂಬ ಪರಿಕಲ್ಪನೆಯನ್ನು ಜಾರಿ ಮಾಡಿದ್ದರು. ಅದು ಇಡೀ ಭಾರತಕ್ಕೆ ಬೆಳಕಾಯಿತು. ಪ್ರಜಾ ಪ್ರತಿನಿಧಿ ಸಭೆ ಎಂದರೆ ರಾಜ್ಯದ ಹಳ್ಳಿಗಾಡಿನ ಕೃಷಿಕ, ಕಾರ್ಮಿಕ, ಶ್ರಮಿಕ ವರ್ಗದಿಂದ ಓರ್ವ ಪ್ರತಿನಿಧಿ ಅರಮನೆಯಲ್ಲಿ ಇರಬೇಕು. ಅವನು ಪ್ರಶ್ನೆಗಳನ್ನು ಕೇಳಬೇಕು. ಯೋಜನೆಯಲ್ಲಿ ಆತ ಭಾಗವಹಿಸಬೇಕು. ಮಹಾರಾಜನ ಮಟ್ಟಕ್ಕೆ ಅವನು ಮಾತನಾಡಬೇಕು ಎಂದು ಅವರು ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ನಾನು ಪ್ರಜಾ ಪ್ರತಿನಿಧಿ ಆಗಿದ್ದೀನೋ ಇಲ್ಲವೋ ಗೊತ್ತಿಲ್ಲ. ಕಲಾ ಪ್ರತಿನಿಧಿಯಂತೂ ಆಗಿದ್ದೇನೆ. ಕನ್ನಡ ಚಿತ್ರರಂಗದ ಎಲ್ಲ ಲೇಖಕರ ಪರವಾಗಿ ನಾನು ಇದನ್ನು ಸ್ವೀಕರಿಸಿ, ಅಲ್ಲಿ ದೀಪ ಹಚ್ಚಲಿದ್ದೇನೆ ಎಂದು ಹೇಳಿದರು.

ಮನಸ್ಸಿನಲ್ಲಿ ಹಾಡುಗಳು ಉಕ್ಕುತ್ತಿವೆ. ಇದು ಒಳ್ಳೆಯ ಸಂದರ್ಭ. ಹಾಡು ಮಾಡಬಹುದು. ಈಗ ಒಂದು ಸಾಲು ಬರುತ್ತಿದೆ. ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ. ಹುಟ್ಟಿದರೆ ಕನ್ನಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ​ ಮೆಟ್ಟಬೇಕು. ಕನ್ನಡವನ್ನು ಯಾರು ಮೆಟ್ಟುತ್ತಾರೋ ಅವರನ್ನು ಮೆಟ್ಟಬೇಕು. ಒಂದು ರಾಜ್ಯ ಹಲವು ಸಿದ್ಧಾಂತ, ಸಂಘಟನೆಯಿಂದ ಹೋರಾಡುತ್ತಿರುತ್ತದೆ. ಅವರನ್ನೆಲ್ಲ ಒಗ್ಗಟ್ಟಿಗೆ ತರೋದು ಕಷ್ಟ. ಆದರೆ ಕನ್ನಡ ಎಂದರೆ ಎಲ್ಲರೂ ಒಂದಾಗಬೇಕು. ಕನ್ನಡ ಎಂದ ತಕ್ಷಣ ಎಲ್ಲ ಪಕ್ಷಗಳು ಒಂದಾಗಬೇಕು ಎಂದು ತಿಳಿಸಿದರು.

 ಸಂವಿಧಾನ ನಮಗೆ ಸ್ವಾತಂತ್ರ್ಯ ಕೊಟ್ಟಿದೆ. ಸ್ವಾತಂತ್ರ್ಯ ಅನ್ನೋದು ಒಂದು ಸವಿಯಾದ ಗಾಳಿ. ಅದು ಭಾಷೆಯ ಮೂಲಕ ಗೊತ್ತಾಗುತ್ತದೆ. ಕನ್ನಡದ ಕಾಲು ಹಿಡಿದುಕೊಂಡರೆ ಅದು ನಮ್ಮನ್ನು ಕಾಪಾಡುತ್ತದೆ. ಆ ಸ್ವಾತಂತ್ರ್ಯವನ್ನು ಇಟ್ಟುಕೊಂಡು ನಾವು ಸಂವಿಧಾನವನ್ನು ಪ್ರಶ್ನಿಸಬಹುದು. ಅದನ್ನು ಕಳೆದುಕೊಳ್ಳಬಾರದು. ನಾವು ಕನ್ನಡವನ್ನು ಕಳೆದುಕೊಳ್ಳಬಾರದು’ ಎಂದು ಹಂಸಲೇಖ ಹೇಳಿದ್ದಾರೆ.

ಕನ್ನಡ ಭಾಷೆಯ ಮೂಲಕ ದಕ್ಷಿಣವನ್ನು ನಾವು ಭದ್ರ ಪಡಿಸಿಕೊಳ್ಳುವ ಕಾಲ ಬಂದಿದೆ. ತೆಂಕಣದಿಂದ ಉತ್ತರವನ್ನು ಕೂಡ ನಾವು ಪ್ರಶ್ನಿಸಬೇಕು. ಇದಕ್ಕೆಲ್ಲ ಬೇಕಾದ ಪ್ರಮುಖ ಅಂಶವೇ ಕನ್ನಡ. ಇದನ್ನು ಶಾಂತಿ ಮಂತ್ರ ಕನ್ನಡ ಎನ್ನಬಹುದು. ಮನುಜ ಮತ, ವಿಶ್ವ ಪಥ ಅಂತ ಕುವೆಂಪು ಎಂದು ಹೇಳಿದರು. ಅದನ್ನು ನಾವು ಮುಂದುವರಿಸಬೇಕು. ಅದಕ್ಕೆ ನಮ್ಮ ರಾಜ್ಯ ಸಿದ್ಧವಾಗಿದೆ. ನಮ್ಮ ಮುಖ್ಯಮಂತ್ರಿಗಳ ಆಶಯವನ್ನು ಈಡೇರಿಸುತ್ತೇನೆ. ಅವರು ನನಗೆ ಕರೆ ಮಾಡಿ ಈ ಸುದ್ದಿ ತಿಳಿಸಿದರು. ಆಗ ನನ್ನ ಅಭಿಪ್ರಾಯವನ್ನು ಖಚಿತವಾಗಿ ತಿಳಿಸಿದೆ. ಆದರೆ ಅವರು ತಮ್ಮ ಖಚಿತವಾದ ಅಭಿಪ್ರಾಯ ತಿಳಿಸಿದರು. ಅವಿರೋಧವಾಗಿ ನನ್ನ ಹೆಸರು ಆಯ್ಕೆ ಆಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಆಗಲಿ ಅಂತ ಒಪ್ಪಿಕೊಂಡಿದ್ದೇನೆ ಎಂದರು.

ಹಿಂದಿನ ಲೇಖನಬಿಜೆಪಿಗೆ ಯಾವ ನೈತಿಕ ಹಕ್ಕಿದೆ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಲೋಕಸಭಾ ಚುನಾವಣೆಯಲ್ಲಿ 28 ಸೀಟ್ ಗೆಲ್ಲುತ್ತೇವೆ: ಕೆ.ಎಸ್.ಈಶ್ವರಪ್ಪ