ಮನೆ ಅಪರಾಧ ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ: ಓರ್ವನ ಬಂಧನ

ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ: ಓರ್ವನ ಬಂಧನ

0

ಕೋಲಾರ‌ (Kolar): ಚಾಕೊಲೇಟ್ ಹಾಗೂ ಗುಟ್ಕಾ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಶುಭಂ ಬಂಧಿತ ಆರೋಪಿ. ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಕುರುಗಲ್‌ ಕ್ರಾಸ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶುಭಂನನ್ನು ಬಂಧಿಸಿರುವ ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು ಆತನಿಂದ 17 ಕೆ.ಜಿ ತೂಕದ ಗಾಂಜಾ ಚಾಕೊಲೇಟ್ ಹಾಗೂ ದ್ವಿಚಕ್ರ ವಾಹನ ವಶ‌ಪಡಿಸಿಕೊಂಡಿದ್ದಾರೆ.

ಆರೋಪಿಯು ಚಿಲ್ಲರೆ ಅಂಗಡಿ, ಬೀಡಾ, ಡಾಬಾ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಮಹಾಕಾಲ್‌ ಎಂಬ ಹೆಸರಿರುವ ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ಚಾಕೊಲೇಟ್‌ ರೀತಿ ಉಂಡೆ ಮಾಡಿ ಗಾಂಜಾ ಮಾರಾಟ ಮಾಡಿದ್ದಾನೆ. 4.65 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಒಂದು ಚಾಕೊಲೇಟ್‌ ಬೆಲೆ 30ರೂ. ಖರೀದಿಸಿ ಅಂಗಡಿಗೆ 50 ರೂ.ಗೆ ಮಾರಾಟ ಮಾಡುತ್ತಾರೆ. 2,964 ಚಾಕೊಲೇಟ್‌ ಪೊಟ್ಟಣಗಳಿದ್ದವು ಎಂದು ಅಬಕಾರಿ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.

ಅಬಕಾರಿ ಇನ್‌ಸ್ಪೆಕ್ಟರ್‌ ಎ.ಆರ್‌.ಅರುಣಾ, ಸಬ್‌ಇನ್‌ಸ್ಪೆಕ್ಟರ್‌ ಜಯಣ್ಣ, ಕಾನ್‌ಸ್ಟೆಬಲ್‌ ಅನಿಲ್‌ ಹಾಗೂ ಸಾಬೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.