ಮನೆ ಅಂತರಾಷ್ಟ್ರೀಯ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ: ಖಾಸಗಿ ನಿವಾಸಕ್ಕೆ ಬೆಂಕಿ

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ: ಖಾಸಗಿ ನಿವಾಸಕ್ಕೆ ಬೆಂಕಿ

0

ಕೊಲಂಬೋ (Colombo): ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಅಧ್ಯಕ್ಷ ಗೋಟಾಬಯ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ ನೀಡಿದ್ದಾರೆ.

ಸಿಂಘೆ ರಾಜೀನಾಮೆ ನೀಡಿದ ಬೆನ್ನಲ್ಲೇ ಉದ್ರಿಕ್ತರ ಗುಂಪೊಂದು ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ರನಿಲ್ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸದ ಒಳಗೆ ನುಗ್ಗಿದ ಪ್ರತಿಭಟನಾಕಾರರು, ಅದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಲಂಕಾದ ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿ ಅವರಿಗೆ ಸೇರಿದ ವಾಹನಗಳಿಗೆ ಹಾನಿ ಮಾಡುವುದು ವಿಡಿಯೋಗಳಲ್ಲಿ ಸೆರೆಯಾಗಿದೆ.

ರಾನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾದ ‘ಟೆಂಪಲ್ ಟ್ರೀ’ ಮುಂಭಾಗದ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಸೇನೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ ಚೆದುರಿಸಿದ್ದರು. ಆದರೆ ಅವರ ಖಾಸಗಿ ನಿವಾಸದ ಕಡೆಗೆ ನಡೆದ ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ.

ನಾಗರಿಕರ ಸುರಕ್ಷತೆ ಮತ್ತು ಸರ್ವ ಪಕ್ಷಗಳ ಸರ್ಕಾರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಪಕ್ಷದ ನಾಯಕರ ಅತ್ಯುತ್ತಮ ಶಿಫಾರಸನ್ನು ಅಂಗೀಕರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಕ್ರಮ ಸಿಂಘೆ ಹೇಳಿದ್ದರು. ವಿಕ್ರಮಸಿಂಘೆ ಅವರು ಹೊಸ ಸರ್ಕಾರ ರಚನೆಯಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಲಂಕಾದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಂಸತ್ ಸ್ಪೀಕರ್ ಸಭೆಗೂ ಮುನ್ನ ವಿಕ್ರಮ ಸಿಂಘೆ ಕೆಲವು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು.

ಹಿಂದಿನ ಲೇಖನ2ನೇ ಟಿ20: ಇಂಗ್ಲೆಂಡ್‌ ವಿರುದ್ಧ 49 ರನ್‌ ಗಳ ಜಯ, ಸರಣಿ ವಶಪಡಿಸಿಕೊಂಡ ಭಾರತ
ಮುಂದಿನ ಲೇಖನಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ: ಓರ್ವನ ಬಂಧನ