ಮನೆ ರಾಜ್ಯ ‘ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ’ : ಕಾಂಗ್ರೆಸ್ ನಾಯಕರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ!

‘ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ’ : ಕಾಂಗ್ರೆಸ್ ನಾಯಕರ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ!

0

ಬೆಂಗಳೂರು: ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬಗ್ಗೆ ಪ್ರಶ್ನೆ ಎತ್ತಿದ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸಾಕ್ಷಿ ಬೇಕಾದವರು ಪಾಕಿಸ್ತಾನಕ್ಕೇ ಹೋಗಲಿ” ಸಾಕ್ಷಿ ಸಂಗ್ರಹ ಮಾಡಿಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹರಿಹಾಯ್ದರು.

ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹೇಳಿಕೆಗಳಿಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ (Pakistan) ವಿರುದ್ಧ ನಮ್ಮ ಸೈನಿಕರು ಹೋರಾಟ ಮಾಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಮಲ್ಲಿಕಾರ್ಜುನ ಖರ್ಗೆ ನಾವು ಬೆಂಬಲ ಕೊಡುತ್ತೇವೆ ಅಂದರು. ಸರ್ಕಾರದ ಎಲ್ಲಾ ನಿರ್ಧಾರಕ್ಕೆ ಸಹಕಾರ ಕೊಡುತ್ತೇವೆ ಅಂದರು. ಈಗ ಬೇರೆ ಬೇರೆ ರಾಜ್ಯದಲ್ಲಿ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೇರೆ ಬೇರೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದು ಹೈಕಮಾಂಡ್ ಸೂಚನೆಯಾ ಎಂದು ಕಾಂಗ್ರೆಸ್ ಹೈಕಮಾಂಡ್ ತಿಳಿಸಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನದ ಒಳಗೆ, ಹೊರಗೆ ನಮ್ಮ ಸೇನೆ ಭಯೋತ್ಪಾದಕರನ್ನ, ತರಬೇತಿ ಕೇಂದ್ರಗಳನ್ನು ಹೊಡೆದಿದ್ದಾರೆ. ಅವರ ಕುಟುಂಬಕ್ಕೆ ಪಾಕಿಸ್ತಾನ ಸರ್ಕಾರ ಹಣ ಕೊಟ್ಟಿದೆ. ಈಗ ಅದಕ್ಕೆ ಸಾಕ್ಷಿ ಏನು ಅಂತ ಕಾಂಗ್ರೆಸ್ ಕೇಳುತ್ತಿದೆ. ನಮ್ಮ ಸೈನಿಕರನ್ನು ಅವಮಾನಿಸುತ್ತಿದೆ. ಹಿಂದೆ ಸರ್ಜಿಕಲ್ ಸ್ಟ್ರೈಕ್‌ಗೂ ಸಾಕ್ಷಿ ಕೇಳಿದ್ದರು. ಈಗ ಆಪರೇಷನ್ ಸಿಂಧೂರಕ್ಕೂ ಸಾಕ್ಷಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬೇಕು. ಇಲ್ಲದೇ ಹೋದರೆ ಅವರ ನಾಯಕರಿಗೆ ಪಾಕಿಸ್ತಾನ ಪ್ರವಾಸ ಭಾಗ್ಯ ಕೊಡಿ. ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ. ಅನುಭವ ಪಡೆದು ಬರಲಿ ಎಂದು ಹರಿಹಾಯ್ದರು.

ಜಮೀರ್ ನಾನೇ ಬಾಂಬ್ ಹಾಕ್ತೀನಿ ಅಂದರು. ಬಾಂಬ್ ಹಾಕೋದು ಬೇಡ. ಅವರು ಪಾಕಿಸ್ತಾನ ಪ್ರವಾಸ ಮಾಡಿ ಬರಲಿ. ನಿಮ್ಮ ನಾಯಕ ರಾಹುಲ್ ಗಾಂಧಿ ಭಾರತದ ವಿರುದ್ಧ ಮಾತನಾಡುತ್ತಾರೆ. ಚುನಾವಣೆ ಬಂದಾಗ ಚುನಾವಣೆ ಮಾಡೋಣ. ದೇಶದ ಯುದ್ಧದ ವಾತಾವರಣದಲ್ಲಿ ರಾಜಕೀಯ ಮಾಡುತ್ತೀರಾ? ನಿಮಗೆ ನಮ್ಮ ಹೆಣ್ಣುಮಕ್ಕಳ ಧಿಕ್ಕಾರ ಇದೆ. ಸಾವಿನಲ್ಲಿ, ಹೋರಾಟದಲ್ಲಿ ರಾಜಕೀಯ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಕಪ್ಪು ಪಟ್ಟಿ ತೋರಿಸಬೇಕಾಗಿದೆ ಎಂದು ಗುಡುಗಿದರು.

ತಿರಂಗಾ ಯಾತ್ರೆ ಜನ ಮಾಡುತ್ತಿದ್ದಾರೆ. ಬಿಜೆಪಿ ಯಾತ್ರೆ ಮಾಡುತ್ತಿಲ್ಲ. ಜನರೇ ಬಂದು ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

ಆಪರೇಷನ್ ಸಿಂಧೂರ ಕುರಿತು ಭಾರತೀಯ ಸೇನೆಯಿಂದ ನೀಡಲಾದ ಅಧಿಕೃತ ಮಾಹಿತಿಗೆ ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಸೇನಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಂದ ಈ ಕುರಿತು ಅನುಮಾನ ವ್ಯಕ್ತಪಡಿಸಿದ ಹೇಳಿಕೆಗಳು ಹೊರಬಿದ್ದಿವೆ. ಇದರಿಂದಾಗಿ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.