ಮನೆ ದೇವಸ್ಥಾನ ಶ್ರೀ ಭದ್ರಕಾಳಿ ಮಾಡಾಯಿಕಾವಿಲಮ್ಮ

ಶ್ರೀ ಭದ್ರಕಾಳಿ ಮಾಡಾಯಿಕಾವಿಲಮ್ಮ

0

ಪ್ರಾಚೀನ ಕಾಲದಿಂದಲೇ ಭಾರತೀಯರು ಶ್ರೀದೇವಿ – ಶಕ್ತಿಯನ್ನು ಪೂಜಿಸಿ, ಆರಾಧಿಸುತ್ತಾ ಬಂದಿರುತ್ತಾರೆ. ದ್ರಾವಿಡ ಸಂಸ್ಕಾರ ಕಾಲದಲ್ಲಿ ಶಿವಶಕ್ತಿಗಳನ್ನು ಒಟ್ಟಾಗಿ ಆರಾಧಿಸುತ್ತಿದ್ದರೆಂದು ಪುರಾಣೇತಿಹಾಸಗಳೂ, ಸಾಹಿತ್ಯ ಕೃತಿಗಳೂ ತಿಳಿಸುತ್ತವೆ. ಉತ್ತರ ಭಾರತದಿಂದಾಗಮಿಸಿದ ದ್ರಾವಿಡ ಜನಾಂಗವು ದಕ್ಷಿಣದಲ್ಲಿ ನೆಲೆಯೂರಿ ಆಡಳಿತ ನಡೆಸಿರುವ ಪ್ರಧಾನ ರಾಜ್ಯಗಳು ಪಾಂಡ್ಯ ಮತ್ತು ಚೇರ ಎಂಬಿವುಗಳಾಗಿವೆ. ಐತಿಹಾಸಿಕವಾಗಿ ಪಾಂಡ್ಯರ ರಾಜಧಾನಿ ಚೇರ ರಾಜ್ಯವು ಕೇರಳವೆಂದು ಕರೆಯಲ್ಪಡುತ್ತಿದೆ. ಈ ಎರಡು ರಾಜ್ಯಗಳಲ್ಲಿ ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ದೇವಿ ಕ್ಷೇತ್ರಗಳು, ಸ್ತ್ರೀ-ದೈವ ಆರಾಧನಾಲಯಗಳು ಇದ್ದು ಶ್ರದ್ಧಾವಂತರಿಂದ ಪರಿಪಾಲನೆಗೊಳ್ಳುತ್ತಿದ್ದು “ಭದ್ರಕಾಳಿ ಚರಿತೆ” ಎಂಬ ದೇವಿ ಮಹಾತ್ಮೆಯ ಪುಣ್ಯ ಕಥೆಯನ್ನು ಹಿನ್ನೆಲೆಯಾಗಿ ಪಾರಾಯಣ ಮಾಡಲಾಗುತ್ತದೆ.

ಶಕ್ತ್ಯಾರಾಧಕರು ಭಗವತಿಯನ್ನು ಆದಿಪರಾಶಕ್ತಿಯ ಅಂಶವೆಂದೂ, ಕಾಳಿ ಎಂದೂ, ಭದ್ರಕಾಳಿ ಎಂದೂ, ಚಂಡಿ ಎಂದೂ, ರಕ್ತ ಚಾಮುಂಡಿ ಎಂದೂ ನಂಬುತ್ತಾರೆ. ಕೇರಳದ ತೆಯ್ಯಂ ಆರಾಧನೆಯಲ್ಲಿ ಭಗವತಿಗೆ ಪ್ರಧಾನ ಸ್ಥಾನವಿದೆ. ದಕ್ಷಿಣ ಕೇರಳದಲ್ಲಿ ಭಗವತಿಯನ್ನು ಆದಿಶಕ್ತಿ ಅಂಶವೆಂದು ನಂಬಿ ಆರಾಧಿಸುತ್ತಾರೆ. ಈ ಭಗವತಿ ಕ್ಷೇತ್ರದಲ್ಲಿ ದೇವಿ, ಭದ್ರಕಾಳಿ, ಇತ್ಯಾದಿ ಉಗ್ರ ಮೂರ್ತಿಗಳ ವಿಗ್ರಹಗಳನ್ನು ಇಟ್ಟು ಆರಾಧಿಸುತ್ತಾರೆ. ಆದರೆ ಉತ್ತರ ಕೇರಳದ ಭಗವತಿ ಕ್ಷೇತ್ರದಲ್ಲಿ ಹೆಚ್ಚಿನಡೆ ಆಯುಧಗಳನ್ನು ಇಟ್ಟು ಆರಾಧನೆ ನಡೆಸಲಾಗುತ್ತದೆ. ಕೆಲವೆಡೆಗಳಲ್ಲಿ ವಿಗ್ರಹಗಳನ್ನಿಡುವ ಕ್ರಮವೂ ಇದೆ. ಅಂತೆಯೇ ಆಯುಧ-ವಿಗ್ರಹಗಳೆರಡನ್ನೂ ಪೂಜಿಸುವ ಕ್ಷೇತ್ರಗಳು ಇವೆ. ಶ್ರೀ ಮಾಡಾಯಿಕಾವು ಕ್ಷೇತ್ರದಲ್ಲಿ ದೇವಿಯು

ವಿಗ್ರಹ ಆಯುಧಗಳೆರಡಕ್ಕೂ ಪೂಜೆಗಳು ಸಲ್ಲುತ್ತದೆ. ಅಮ್ಮ ಎಂಬ ಸಾಮಾನ್ಯ ವಾಚಕ ಪದವು ಶಕ್ತಿದೇವತೆಯ ಮೂಲವನ್ನು ಸೂಚಿಸುತ್ತದೆ. ಅನಾದಿ ಕಾಲದಿಂದಲೂ ಎಲ್ಲಾ ಜನಾಂಗಗಳೂ ಒಂದಲ್ಲ ಒಂದು ಹೆಸರಿನಿಂದ ಆರಾಧಿಸಿಕೊಂಡು ಬಂದಿರುವುದು ಈ ಮಹಾಮಾತೆಯನ್ನೇ. ಮಳೆ, ಬೆಳೆ, ಆರೋಗ್ಯಭಾಗ್ಯ, ಸಂತಾನಭಾಗ್ಯ, ಪಶು ಸಂಪತ್ತು, ಸುಖ ಸಂತೋಷಗಳನ್ನ ಅನುಗ್ರಹಿಸಿ, ತಾಯಿಯಾಗಿ ರಕ್ಷಿಸುವ ಮಾತೃದೇವತೆಯನ್ನು ರಾಮಕೃಷ್ಣ ಪರಮಹಂಸರೆ ಮೊದಲಾದ ಮಹಾಚೇತನಗಳು ಭಗವತಿ, ಕಾಳಿ, ದಿವ್ಯಮಾತೆ ಎಂದು ಸ್ತುತಿದ್ದಾರೆ.

ಶಕ್ತ್ಯಾರಾಧನೆ ಎಂದರೆ ದೇವಿಯ ಆರಾಧನೆ ಶಕ್ತ್ಯಾರಾಧನೆಯು ಆರಾಧಕರಿಗೆ ಮಹಾಬಲವನ್ನೂ, ಮಹೋತ್ಸವವನ್ನೂ, ಮಹಾಭಯ ವಿನಾಶವನ್ನೂ ಉಂಟುಮಾಡುವುದು. ದುಷ್ಟಶಿಕ್ಷೆ – ಶಿಷ್ಟರಕ್ಷೆ ದೇವಿಯ ಸ್ವಭಾವ. ದುಷ್ಟರ ವಿನಾಶಕ್ಕಾಗಿ ದೇವಿಯು ಮಹಾಘೋರದಂಷ್ಟ್ರಳಾಗಿ ಗೋಚರಿಸುವಳು. ಈ ಶಕ್ತಿ ದೇವತೆ ಬೇತಾಳವಾಹಿನಿಯಾಗಿ, ಶಕ್ತಿ ಹಸ್ತಳವಾಗಿ, ತ್ರಿನೇತ್ರಳಾಗಿ, ಭೀಮಾಕೃತಿಯಿಂದ ಮುಕ್ತಕೇಶಿಯಾಗಿ, ಲೋಲಜಿಹ್ವಳಾಗಿ, ರುಧಿರಪಾನಪ್ರಿಯಳಾಗಿ, ಚತುರ್ಭುಜಳೋ, ಅಷ್ಟಬಾಹುಗಳುಳ್ಳವಳೋ ಆಗಿ, ಭೀಷಣಗಳಾಗಿ ಗೋಚರಿಸಿದರೂ ಅವಳು ಭಕ್ತನುಗ್ರಹಗಳು, ವರಾಭಯಕರಳು, ಜಗನ್ಮಾತೆಯು, ಸರ್ವಸಿದ್ಧಿ ಪ್ರದಾತೆಯೂ ಆಗಿರುವಳು. ಭಕ್ತನು ಒಂದು ವೇಳೆ ಅಪರಾಧವೆಸಗಿದರೂ ತಾಯಿಯೂ ತನ್ನ ಮಕ್ಕಳನ್ನು ಮನ್ನಿಸುವಂತೆ ಕ್ಷಮಾಮೂರ್ತಿಯಾಗಿ ಅವಳು ಕಾಪಾಡುವಳು.

ಸರ್ವಮಂಗಳೆಯೂ, ಸರ್ವಾರ್ಥ ಸಾಧಕಳೂ ಆಗಿರುವ ಆ ಮಹಾತಾಯಿಯೇ ಮಾಡಾಯಿಕಾವ್ ನಲ್ಲಿ ಆರಾಧಿಸಲ್ಪಡುವ ಭಗವತಿಯಾಗಿರುತ್ತಾಳೆ. ಅಲ್ಲಿ ಆದಿಶಕ್ತಿ ದೇವಿಯು ಭಗವತಿಯಾಗಿ, ವಿದ್ಯಾಧಿದೇವತೆ ಸರಸ್ವತಿಯಾಗಿ, ಐಶ್ವರ್ಯ ದೇವಿ ಲಕ್ಷ್ಮಿಯಾಗಿ ಪೂಜಿಸಲ್ಪಡುತ್ತಾಳೆ. ಭಕ್ತರ ಕಾಮದೇನು ಸ್ವರೂಪವಾದ ಶಕ್ತಿ ದೇವತೆಯು ರಕ್ತಮಾಲಾಧರಳಾಗಿ, ರಕ್ತಗಂಧ ಲೇಪಿತೆಯಾಗಿ ತಮ್ಮೆಲ್ಲ ಆಪತ್ತುಗಳನ್ನು ನಿವಾರಿಸುವಳೆಂದೂ ಶಕ್ತ್ಯರಾಧಕರ ಅಚಲ ವಿಶ್ವಾಸ. ಆದರೆ ಅಸುರೀ ಶಕ್ತಿಯ ಮರ್ಧನಕ್ಕೆ ಘೋರಾಸುರೀ ಶಕ್ತಿಯೇ ಬೇಕು. ಕಬ್ಬಿಣವನ್ನು ಕತ್ತರಿಸಲು ಇನ್ನಷ್ಟು ಗಟ್ಟಿಯಾದ ಉಕ್ಕೆ ಬೇಕಾಗುವಂತೆ ದುಷ್ಟಶಕ್ತಿ ನಿರ್ಮೂಲನೆಗೆ ಉಗ್ರಸ್ವರೂಪನಾದ ದೇವಿಯೇ ಬೇಕು. ಆಕೆಯನ್ನು ಭಯಭಕ್ತಿಯಿಂದ ಆರಾಧಿಸಿದರೆ ನಮಗೆಲ್ಲ ಬರುವಂತಹ ಅನಿಷ್ಠಗಳನ್ನೂ, ರೋಗರುಜಿನಗಳನ್ನೂ, ಶತ್ರುಬಾಧೆಗಳನ್ನೂ ಖಂಡಿತವಾಗಿಯೂ ನಿವಾರಿಸುತ್ತಾಳೆ ಎಂಬುದರಲ್ಲಿ ಸಂಶಯವಿಲ್ಲ.

ಹಿಂದಿನ ಲೇಖನಆರಿದ್ರಾ
ಮುಂದಿನ ಲೇಖನ“ಇನಾಮ್ದಾರ್‌’ ಚಿತ್ರ ವಿಮರ್ಶೆ