ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿದ್ದಾರೆ.
ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಉಪಸ್ಥಿತಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಕಚೇರಿಗೆ ಆಗಮಿಸಿದ ಅನಿಲ್ ಆಂಟನಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಕೇಂದ್ರ ಸಚಿವ ಪಿಯೂಷ್ ಗೋಯಲ ಅನಿಲ್ ಆಂಟನಿಗೆ ಬಿಜೆಪಿಯ ಸದಸ್ಯತ್ವ ನೀಡಿದ್ದಾರೆ. ಇದಕ್ಕಿಂತ ಮೊದಲು ಅನಿಲ್, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು.
ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ವಿವಾದದ ಬಗ್ಗೆ ವಿಭಿನ್ನ ನಿಲುವು ತಳೆದಿದ್ದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ತೀವ್ರ ಟೀಕೆ ಎದುರಿಸಿದ್ದ ಅನಿಲ್ ಆಂಟನಿ ಅವರು ಪಕ್ಷದ ಎಲ್ಲಾ ಅಧಿಕೃತ ಸ್ಥಾನಗಳನ್ನು ತೊರೆದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಸೆಲ್ ನಿರ್ವಾಹಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.
ಬಿಬಿಸಿ ಸಾಕ್ಷ್ಯಚಿತ್ರ ವಿವಾದದ ಬಗ್ಗೆ ಕಾಂಗ್ರೆಸ್ ಅಧಿಕೃತ ನಿಲುವಿಗಿಂತ ಭಿನ್ನವಾದ ನಿಲುವನ್ನು ಅನಿಲ್ ಆಂಟನಿ ತೆಗೆದುಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ನ ಒಂದು ವಿಭಾಗ ಟೀಕಿಸಿದೆ. ಭಾರತದ ಜನರು ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ದೇಶವನ್ನು ದುರ್ಬಲಗೊಳಿಸುವುದು ಅಪಾಯಕಾರಿ ಎಂದು ಅನಿಲ್ ಹೇಳಿದ್ದು ವಿವಾದವಾಗಿತ್ತು.