ಹೊಸದಿಲ್ಲಿ: ಛತ್ತೀಸ್ ಗಢ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರು ಸೋಮವಾರ ಭಾರತದ RAW (ಬಾಹ್ಯ ಗುಪ್ತಚರ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಪ್ರಸ್ತುತ ರಾ ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್ ಅವರು ಅಧಿಕಾರಾವಧಿಯನ್ನು ಜೂನ್ 30 ರಂದು ಪೂರ್ಣಗೊಳಿಸಿದ ನಂತರ ಸಿನ್ಹಾ ಅವರು ಉತ್ತರಾಧಿಕಾರಿಯಾಗಲಿದ್ದಾರೆ ಮತ್ತು ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
ಸಿನ್ಹಾ, 1988 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯಟ್ ನ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಗೆ RAW ಕಾರ್ಯದರ್ಶಿಯಾಗಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹುದ್ದೆಯ ಪ್ರಭಾರವನ್ನು ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಅವರ ಅಧಿಕಾರಾವಧಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.