ಮನೆ ಅಪರಾಧ ದೆಹಲಿಯಿಂದ ಬೆಂಗಳೂರಿಗೆ ಬಂದು ಚಿನ್ನಾಭರಣ ಕಳ್ಳತನ: ಬಿಎಸ್‌ ಸಿ ಪದವೀಧರನ ಬಂಧನ

ದೆಹಲಿಯಿಂದ ಬೆಂಗಳೂರಿಗೆ ಬಂದು ಚಿನ್ನಾಭರಣ ಕಳ್ಳತನ: ಬಿಎಸ್‌ ಸಿ ಪದವೀಧರನ ಬಂಧನ

0

ಬೆಂಗಳೂರು (Bengaluru): ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗಳಿಗೆ ಭೇಟಿ ನೀಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋ‍ಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಿಎಸ್‌ ಸಿ ಪದವೀಧರ, ದೆಹಲಿ ನಿವಾಸಿ ರಾಹುಲ್‌ ಬಂಧಿತ ಆರೋಪಿ. ಈತನಿಂದ 120 ಗ್ರಾಂ ಚಿನ್ನಾಭರಣ ಹಾಗೂ ₹ 7 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಈತ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ.

ಆರೋಪಿ ರಾಹುಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಹೋಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಕಳ್ಳತನಕ್ಕೆ ಇಳಿದಿದ್ದ. ನಗರಕ್ಕೆ ಬರುತ್ತಿದ್ದ ಆರೋಪಿ, ಒಬ್ಬ ಅಥವಾ ಇಬ್ಬರು ಸಿಬ್ಬಂದಿ ಇರುವ ಮಳಿಗೆಗಳನ್ನು ಗುರುತಿಸುತ್ತಿದ್ದ. ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಭೇಟಿ ನೀಡಿ ಚಿನ್ನಾಭರಣ ತೋರಿಸುವಂತೆ ಹೇಳುತ್ತಿದ್ದ. ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ.

ಕದ್ದ ಆಭರಣಗಳನ್ನು ತ್ವರಿತವಾಗಿ ಮಾರಾಟ ಮಾಡುತ್ತಿದ್ದ ಆರೋಪಿ, ಬಂದ ಹಣವನ್ನು ಪತ್ನಿ ಖಾತೆಗೆ ಜಮೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜಯನಗರ ಹಾಗೂ ಮಲ್ಲೇಶ್ವರದ ಆಭರಣ ಮಳಿಗೆಯಲ್ಲಿ ಕೃತ್ಯ ಎಸಗಿದ್ದ ಆರೋಪಿ ಮುಖಚಹರೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ತನಿಖೆ ಕೈಗೊಂಡು ಈತನನ್ನು ಬಂಧಿಸಲಾಗಿದೆ ಎಂದು ತಿಳಿಸಿವೆ.

ಹಿಂದಿನ ಲೇಖನರಾಜ್ಯದಲ್ಲಿ ಮತ್ತೆ ಮಳೆ: ಆ.23, 24 ರಂದು ಯೆಲ್ಲೋ ಅಲರ್ಟ್‌
ಮುಂದಿನ ಲೇಖನಭಟ್ಕಳದಲ್ಲಿ 8 ವರ್ಷದ ಬಾಲಕನ ಅಪಹರಣ