Saval TV on YouTube
ಚಾಮರಾಜನಗರ(Chamarajanagara): ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ನಡೆದಿರುವ ಪ್ರಕರಣದಲ್ಲಿ ಕಾಡಾನೆ ಹಾಗೂ ಕರಡಿ ದಾಳಿಯಿಂದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಕ್ಕಬರೆ ಗ್ರಾಮದ ಬಳಿ ರೈತ ಕೊಕ್ಕಬರೆ ಗ್ರಾಮದ ಪುಟ್ಟಸ್ವಾಮಿ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರ್ಯ ನಿಮಿತ್ತವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಪುಟ್ಟಸ್ವಾಮಿ ಹಿಂತಿರುಗುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಎರಡು ಕಾಲಿನ ಮೂಳೆ ಮುರಿದಿದೆ.
ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತೊಂದೆಡೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ದನಗಳನ್ನು ಮೇಯಿಸುವಾಗ ಕರಡಿಯೊಂದು ದಾಳಿ ಮಾಡಿದ ಪರಿಣಾಮ ಬೆಳ್ಳಿತಂಬಡಿ ಎಂಬವರು ಗಾಯಗೊಂಡಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.















