ಮನೆ ರಾಜಕೀಯ ಮಹಿಳೆಯರಿಗಾಗಿ ಪ್ರತ್ಯೇಕ ಮಾರುಕಟ್ಟೆ ಕೇಂದ್ರ: ಎಸ್.ಎ. ರಾಮದಾಸ್

ಮಹಿಳೆಯರಿಗಾಗಿ ಪ್ರತ್ಯೇಕ ಮಾರುಕಟ್ಟೆ ಕೇಂದ್ರ: ಎಸ್.ಎ. ರಾಮದಾಸ್

ಬಲ್ಲಾಳ್ ವೃತ್ತದಲ್ಲಿ ಮಾ.೨೮ರಂದು ಉದ್ಘಾಟನೆ

0

ಮೈಸೂರು: ಮಹಿಳೆಯರಿಗಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಬೆಂಬಲ ನೀಡುವ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾ.೨೮ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೬೨ನೇ ವಾರ್ಡಿನ ವಿದ್ಯಾರಣ್ಯಪುರಂ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಯೋಗಕ್ಷೇಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಮಾಡುವ ನಿಟ್ಟಿನಲ್ಲಿ ೯ ಕೋಟಿ ರೂ‌. ವೆಚ್ಚದಲ್ಲಿ ಬಲ್ಲಾಳ್ ವೃತ್ತದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೇ ತಿಂಗಳ ೨೮ರಂದು ಉದ್ಘಾಟನೆಯಾಗುತ್ತಿದೆ ಎಂದು ತಿಳಿಸಿದರು.

ಇದರೊಂದಿಗೆ ಇಂದಿನ ತಲೆಮಾರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರಸ್ವತಿಪುರಂ ಬಡಾವಣೆಯಲ್ಲಿ ೪ ಕೋಟಿ ರೂಪಾಯಿ ವೆಚ್ಚದಲ್ಲಿ ದೊಡ್ಡ ಗ್ರಂಥಾಲಯ ಸ್ಥಾಪನೆ ಆಗುತ್ತಿದ್ದು, ಅದಕ್ಕೂ ಸದ್ಯದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಇಡೀ ಕ್ಷೇತ್ರ ಮಾದರಿ ಎಂಬುದಕ್ಕೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳೇ  ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದೇ ಸಾಕ್ಷಿಯಾಗಿದೆ. ಮನುಷ್ಯರಿಗೆ ಮಾತ್ರವಲ್ಲ, ಬೀದಿ ನಾಯಿಗಳು ಹಾಗೂ ಕೋತಿಗಳು ಕೂಡ ಗೌರವಯುತ ಬದುಕು ಸಾಗಿಸಬೇಕೆನ್ನುವ ಆಶಯದಿಂದ ಅವುಗಳಿಗಾಗಿ ಸುಸಜ್ಜಿತವಾದ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಇದೇ ತಿಂಗಳ 25ರಂದು ನಾಯಿಗಳ ಪುನರ್ವಸತಿ ಕೇಂದ್ರ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿರುವ ತುಳಸೀದಾಸ್ ದಾಸಪ್ಪ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆ ಇಂದು ಯಾವುದೇ ಖಾಸಗಿ ಆಸ್ಪತ್ರೆಗೆ ಸರಿಸಾಟಿಯಾಗಿ ನಿರ್ಮಿಸಲಾಗಿದೆ. ನಿರೀಕ್ಷೆ ಮೀರಿದ ಸೇವೆ ದೊರೆಯುತ್ತಿದೆ. ಪರಿಣಾಮ, ಜಯನಗರ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ 36 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಅದು ಒಂದು ದಾಖಲೆಯಾಗಿದೆ ಎಂದು ತಿಳಿಸಿದರು.

ಅಂದುಕೊಂಡಂತೆ ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಕಾರ್ಯಯೋಜನೆ ರೂಪಿಸಿ ಅನುಷ್ಠಾನ ಮಾಡುವ ಮೂಲಕ ರಾಜ್ಯದಲ್ಲಿಯೇ ನಂಬರ್ ಒನ್ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿ, ಸಹಕಾರವೇ ಕಾರಣವಾಗಿದೆ. ಇಡೀ ಕ್ಷೇತ್ರವನ್ನು ಬೋರ್ವೆಲ್ ಮುಕ್ತ ಮಾಡಲಾಗಿದೆ. ‌482 ಕಿಮೀ ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲಾಗಿದೆ. ‌ರಾಜಕಾಲುವೆ, ಯುಜಿಡಿ, ಮಳೆ ನೀರಿನ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ ಎಂದರು.

ಬೋರ್ ವೆಲ್ ಮುಕ್ತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದೇವೆ. ಮಳೆಗಾಲದಲ್ಲಿ ವಾರ್ಡಿನ‌ ಹಲವೆಡೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದೀಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹತ್ತು ಹಲವು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಬಗ್ಗೆ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ. ಆ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅವರ ಮಾರ್ಗದಲ್ಲಿ ನಾವು ಹೆಜ್ಜೆ ಇಡಬೇಕು. ಅದಕ್ಕಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಇಚ್ಚೆ ಹಾಗೂ ಗುರಿ ನಮ್ಮದಾಗಬೇಕು ಎಂದರು.

ನಿಮ್ಮ ಋಣ ನನ್ನ ಮೇಲಿದೆ. ಅದನ್ನು ಕಾಯಾ, ವಾಚಾ, ಮನಸಾ ತೀರಿಸುತ್ತಲೂ ಬಂದಿದ್ದೇನೆ. ಇದೀಗ ಮತ್ತೆ ಚುನಾವಣೆ ಎದುರಾಗಿದ್ದು, ಯಾವುದೇ ರೀತಿಯ ಖರ್ಚಿಲ್ಲದೆ ಈ ಚುನಾವಣೆ ನಡೆಸುವ ಮೂಲಕ ಹೊಸ ಭಾಷ್ಯ ಬರೆಯೋಣ ಎಂದರು.

ಇಟ್ಟುಕೊಂಡು ರಾಜಕೀಯ ಬದುಕು ನಡೆಸಿದ್ದೇನೆ. ಆ ಬಗ್ಗೆ ಮೈಸೂರಿನ ಜನರಿಂದ ರಾಷ್ಟ್ರವ್ಯಾಪಿ ನಾಯಕರಿಗೂ ತಿಳಿದಿದೆ. ಅದು ಹಲವಾರು ದೊಡ್ಡ ದೊಡ್ಡ ವೇದಿಕೆಯಲ್ಲಿ ಚರ್ಚೆ ಆಗಿದೆ. ಅದು ನನ್ನೊಬ್ಬನಿಗೆ ಸಂದ ಗೌರವ ಅಲ್ಲ. ಇಡೀ ಕೃಷ್ಣರಾಜ ಕ್ಷೇತ್ರಕ್ಕೆ ಸಂದ ಗೌರವ ಎಂದರು.

ಈ ಕ್ಷೇತ್ರ ಮಾದರಿಯಾಗಿ ಇರಬೇಕು. ಭ್ರಷ್ಟಾಚಾರ ಮುಕ್ತ ಕ್ಷೇತ್ರ ಎಂಬ ಖ್ಯಾತಿ ಪಡೆಯಬೇಕು. ಅದಕ್ಕಾಗಿ ನಾನು ಮುಂದಿನ ಚುನಾವಣೆಯಲ್ಲಿ ನಾಮಪತ್ರದ ಠೇವಣಿ ಹಣವಾಗಿ ಪ್ರತಿ ಮನೆಯಿಂದ ಹತ್ತು ರೂಪಾಯಿ ಕೊಡಿ ಎಂದು ಮನವಿ ಮಾಡುತ್ತಿದ್ದೇನೆ. ಓಟು ನಿಮ್ಮದೇ, ನೋಟು ನಿಮ್ಮದೇ ಆಗರಲಿ.‌ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.

ಹಿಂದಿನ ಲೇಖನವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಪರಿಣಾಮಕಾರಿ ಅನುಷ್ಠಾನ: ಸುಭಾಷ್ ಡಿ ಆಡಿ
ಮುಂದಿನ ಲೇಖನನಿರ್ಮಲಾನಂದನಾಥ್ ಸ್ವಾಮೀಜಿ ವಿರುದ್ಧ ಹೇಳಿಕೆ: ಅಡ್ಡಂಡ ಕಾರ್ಯಪ್ಪ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ