ಮನೆ ಯೋಗಾಸನ ರಕ್ತದೊತ್ತಡವನ್ನು ನಿಯಂತ್ರಿಸಲು ‘ಸೇತುಬಂಧಾಸನ’ ಸಹಕಾರಿ

ರಕ್ತದೊತ್ತಡವನ್ನು ನಿಯಂತ್ರಿಸಲು ‘ಸೇತುಬಂಧಾಸನ’ ಸಹಕಾರಿ

0

ರಕ್ತದೊತ್ತಡದಲ್ಲಿ ಏರುಪೇರಾಗುವ ಸಮಸ್ಯೆ ಕೇವಲ ವೃದ್ಧರಲ್ಲಿ ಮಾತ್ರವಲ್ಲದೇ, ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅತಿಯಾದ ಕೆಲಸದೊತ್ತಡದಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಹಾಗು ವ್ಯಾಯಾಮವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದು ರಕ್ತದೊತ್ತಡದಲ್ಲಿ ಏರುಪೇರಾಗಲು ಕಾರಣವಾಗುತ್ತದೆ.

Join Our Whatsapp Group

ನೀವು ನಿಜವಾಗಲು, ಸಹಜ ಸ್ಥಿತಿಯಲ್ಲಿ ರಕ್ತದೊತ್ತಡವನ್ನು ನಿರ್ವಹಿಸಲು ನೈಸರ್ಗಿಕವಾದ ಪರಿಹಾರವನ್ನು ಬಹಳ ಬೇಗ ಕಂಡುಕೊಳ್ಳಬೇಕಾದ್ದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಸೇತುಬಂಧಾಸನ ಅಥವಾ ಆಂಗ್ಲ ಭಾಷೆಯಲ್ಲಿ “ಬ್ರಿಡ್ಜ್ ಪೋಸ್” ಎಂತಲೂ ಕರೆಯಲ್ಪಡುವ ಈ ಆಸನವು ರಕ್ತದೊತ್ತಡವನ್ನು ನಿರ್ವಹಿಸಲು ಉತ್ತಮವಾಗಿದೆ.

ಸೇತುಬಂಧಾಸನ ಎಂಬ ಹೆಸರು ಸಂಸ್ಕೃತ ಭಾಷೆಯದ್ದಾಗಿದೆ. “ಸೇತು” ಎಂದರೆ ಸೇತುವೆ ಎಂದರ್ಥ. “ಬಂಧ” ಎಂದರೆ ಬೀಗ ಎಂದರ್ಥ ಹಾಗು “ಆಸನ” ಎಂದರೆ ಭಂಗಿ ಎಂದರ್ಥ. ಇದು ಬಹಳ ಸರಳವಾದ ಆಸನವಾಗಿದ್ದು, ಪ್ರಾರಂಭಿಕ ಹಂತದಲ್ಲಿರುವವರು ಕೂಡ ಸುಲಭವಾಗಿ ಹಾಕಬಹುದು. ಬನ್ನಿ, ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

ಸೇತುಬಂಧಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:

1. ಮೊದಲಿಗೆ, ನಿಮ್ಮ ಎರಡೂ ಕಾಲುಗಳು ಮುಂದಕ್ಕೆ ಚಾಚಿರುವಂತೆ ಕೆಳಗೆ ಕುಳಿತುಕೊಳ್ಳಬೇಕು.

2. ನಿಧಾನವಾಗಿ ಹಾಗೆ ಹಿಂದಕ್ಕೆ ಬಾಗಿ ಮಲಗಿಕೊಳ್ಳಿ.

3. ನಿಮ್ಮ ಪಾದಗಳಿಗೆ ಮತ್ತು ಸೊಂಟಕ್ಕೆ ಸ್ವಲ್ಪ ಅಂತರವಿರುವಂತೆ ಮಂಡಿಯನ್ನು ಮಡಿಸಿ.

4. ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು.

5. ದೀರ್ಘವಾಗಿ ಉಸಿರಾಡಿಸಿ, ನಿಧಾನವಾಗಿ ಬೆನ್ನನ್ನು ಎತ್ತಬೇಕು.

6. ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು.

7. ನಿಮ್ಮ ಎರಡೂ ತೊಡೆಗಳು ಸಮನಾಂತರವಾಗಿರಬೇಕು.

8. ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನು ಹಾಗು ಹೆಡಕನ್ನು ಮೇಲೆತ್ತಿ.

9. ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು.

ಸೇತುಬಂಧಾಸನದಿಂದಾಗುವ ಇತರ ಲಾಭಗಳು:

*ಸ್ನಾಯುಗಳಿಗೆ ಶಕ್ತಿ ಕೊಡುತ್ತದೆ.

*ಕಾಲುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ.

*ಬೆನ್ನು ಹಾಗು ಕುತ್ತಿಗೆಯನ್ನು ಸದೃಢಗೊಳಿಸುತ್ತದೆ.

*ಪಚನ ಕಾರ್ಯವನ್ನು ವೃದ್ಧಿಸುತ್ತದೆ.

*ಒತ್ತಡವನ್ನು ನಿವಾರಿಸುತ್ತದೆ.

*ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.

ಥೈರಾಯಿಡ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಎಚ್ಚರ ವಹಿಸಿ:

“ಬ್ರಿಡ್ಜ್ ಪೋಸ್” ಎಂತಲೂ ಕರೆಯಲ್ಪಡುವ ಸೇತುಬಂಧಾಸನದಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿದ್ದರೂ, ಈ ಆಸನವನ್ನು ಹಾಕುವಾಗ ಎಚ್ಚರವಹಿಸಬೇಕು.

ಕುತ್ತಿಗೆ ಅಥವಾ ಭುಜಗಳಲ್ಲಿ ಗಾಯಗಳಾದವರು, ಬೆನ್ನೆಲಬಿನ ಸಮಸ್ಯೆ ಇರುವವರು ಈ ಆಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾ ತರಬೇತಿದಾರರ ಸಲಹೆ ಸೂಚನೆಗಳ ಆಧಾರದ ಮೇಲೆ ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ.