ಮೈಸೂರು: ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಕ್ಕಳ ತಾಯಿ ದೂರು ನೀಡಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಜರಬಾದ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಶರಣರು ಸೇರಿದಂತೆ ಏಳು ಮಂದಿ ವಿರುದ್ಧ ಎಫ್’ಐಆರ್ ದಾಖಲಾಗಿದೆ. ದೌರ್ಜನ್ಯ ನಡೆಸಲು ಶರಣರು, ವಾರ್ಡನ್ ರಶ್ಮಿಯವರ ಮೂಲಕ ತಮ್ಮ ಖಾಸಗಿ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ಎಂಬ ದೂರಿನ ಮೇರೆಗೆ ಶರಣರನ್ನು ಮೊದಲ ಆರೋಪಿಯನ್ನಾಗಿಸಲಾಗಿದ್ದು, -ನಂತರದ ಆರೋಪಿಗಳನ್ನಾಗಿ ವಾರ್ಡನ್ ರಶ್ಮಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಪರಮಶಿವಯ್ಯ ಮತ್ತು ಗಂಗಾಧರಯ್ಯ, ಮುರುಘಾ ಮಠದ ಬಸವಲಿಂಗ ಮತ್ತು ಕರಿಬಸಪ್ಪ ಅವರನ್ನು ಹೆಸರಿಸಲಾಗಿದೆ.
14 ವರ್ಷದ ಇಬ್ಬರು, 15 ವರ್ಷ ಹಾಗೂ 12 ವರ್ಷದ ಒಬ್ಬರು ಸೇರಿ ನಾಲ್ವರು ಬಾಲಕಿಯರನ್ನು ಸಂತ್ರಸ್ತರನ್ನಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.
ದೂರಿನ ಸಾರಾಂಶ:
ನನಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮುರುಘಾ ಮಠದಲ್ಲಿ ದಾಸೋಹ ವಿಭಾಗದಲ್ಲಿ ಅಡುಗೆ ಸಹಾಯಕಳಾಗಿ 7 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಆರು ವರ್ಷದ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಕ್ರಮವಾಗಿ 3ನೇ ಮತ್ತು 1ನೇ ತರಗತಿಗೆ ಸೇರಿಸಿದ್ದರು.
ಒಬ್ಬ ಮಗಳನ್ನು 2019ರಲ್ಲಿ ಮತ್ತು ಇನ್ನೊಬ್ಬ ಮಗಳನ್ನು 2020ರ ಕೋವಿಡ್ ಅವಧಿಯಲ್ಲಿ ಶರಣರು ಮೊದಲಿಗೆ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು ಎಂದು ಮಕ್ಕಳು ನನಗೆ ತಿಳಿಸಿದ್ದಾರೆ. ಅಂದಿನಿಂದಲೂ ನನ್ನ ಮಕ್ಕಳು ಋತುಮತಿಯಾಗುವವರೆಗೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಧ್ಯಾಹ್ನದ ಊಟದ ವೇಳೆಯಲ್ಲಿ ಹಾಗೂ ವಸತಿ ನಿಲಯದ ಕಡೆಗೆ ತೆರಳಿದಾಗಷ್ಟೇ ತನ್ನ ಮಕ್ಕಳನ್ನು ನೋಡಲು ಅವಕಾಶ ಸಿಗುತ್ತಿತ್ತು ಎಂದು ತಿಳಿಸಿದ್ದಾರೆ.
ವಸತಿ ನಿಲಯದಲ್ಲಿದ್ದ 14 ಮತ್ತು 15 ವರ್ಷ ವಯಸ್ಸಿನ ಇನ್ನಿಬ್ಬರು ಬಾಲಕಿಯರು ಶರಣರಿಂದ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂದೂ ಮಹಿಳೆಯರು ಆರೋಪಿಸಿದ್ದಾರೆ.
ಮಕ್ಕಳನ್ನು ಹೆದರಿಸುತ್ತಿದ್ದರು
ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಹೆದರಿಸುತ್ತಿದ್ದರು. ಸ್ವಾಮೀಜಿಯ ಸಹಾಯಕ ಮಹಾಲಿಂಗ ಮತ್ತು ಅಡುಗೆಭಟ್ಟ ಕರಿಬಸಪ್ಪ ಅವರು ಶರಣರ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿಬಿಡುವುದು, ಕೊಠಡಿಗೆ ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುತ್ತಿದ್ದುದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಮಹಿಳೆಯು ಆರೋಪಿಸಿದ್ದಾರೆ.
ಸ್ವಾಮೀಜಿ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರಿಂದ, ನನ್ನ ಮಕ್ಕಳು ಹದಿಯರೆಯದವರಾಗಿದ್ದು, ಮಠದಲ್ಲೇ ನಾನು ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲಳಾಗಿದ್ದುದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಆದರೆ ಇಬ್ಬರು ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ದೂರು ನೀಡಲು ಮುಂದಾದೆ ಎಂದೂ ಹೇಳಿದ್ದಾರೆ.
ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನಜರಾಬಾದ್ ಪೊಲೀಸರು ತಿಳಿಸಿದ್ದಾರೆ.