ಕೊಚ್ಚಿ(Kocchi): ನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಮುಖ ಆರೋಪಿ ನಟ ದಿಲೀಪ್ ಅವರ ಸ್ನೇಹಿತ ಹಾಗೂ ಹೋಟೆಲ್ ಮಾಲೀಕ ಶರತ್ ಜಿ ನಾಯರ್ ಅವರನ್ನು ಕೇರಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ದಿಲೀಪ್ ಜಾಮೀನು ಪಡೆದ ನಂತರ ಅವರ ಮನೆಗೆ ನಾಯರ್ ಭೇಟಿ ನೀಡಿದ ಬಗ್ಗೆ ಚಲನಚಿತ್ರ ನಿರ್ದೇಶಕ ಬಾಲಚಂದ್ರಕುಮಾರ್ ನೀಡಿದ ಹೇಳಿಕೆ ಆಧರಿಸಿ ಈ ಬಂಧನ ನಡೆದಿದೆ.
ಏನಿದು ಪ್ರಕರಣ ?: ನಟ ದಿಲೀಪ್ ಅವರು ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಂಚು ರೂಪಿಸಿದ್ದ ಆಡಿಯೊ ಟಿವಿಗಳಲ್ಲಿ ಪ್ರಸಾರವಾದ ಬಳಿಕ ಅದನ್ನು ಆಧರಿಸಿ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಉದ್ದೇಶಪೂರ್ವಕವಾಗಿ ತನ್ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಲು ತನಿಖಾಧಿಕಾರಿ ಯತ್ನಿಸಿದ್ದಾರೆ ಎಂದು ದಿಲೀಪ್ ದೂರಿದ್ದರು.
ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ನಟಿಯನ್ನು ಕೆಲವು ಆರೋಪಿಗಳು 2017ರ ಫೆಬ್ರವರಿ 17ರಂದು ರಾತ್ರಿ ವಾಹನದಲ್ಲಿ ಅಪಹರಿಸಿ, ಎರಡು ಗಂಟೆಗಳ ಕಾಲ ಕಾರಿನಲ್ಲಿ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು.
ನಟಿಯನ್ನು ಬ್ಲಾಕ್ಮೇಲ್ ಮಾಡಲು ಲೈಂಗಿಕ ದೌರ್ಜನ್ಯದ ಇಡೀ ಕೃತ್ಯವನ್ನು ಚಿತ್ರೀಕರಿಸಿದ್ದರು. ಪ್ರಕರಣದಲ್ಲಿ 10 ಆರೋಪಿಗಳಿದ್ದು, ಆರಂಭದಲ್ಲಿ ಪೊಲೀಸರು ಏಳು ಜನರನ್ನು ಬಂಧಿಸಿದ್ದರು. ನಂತರ ದಿಲೀಪ್ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.