ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಎಸ್ ಐಟಿ ಈಗಾಗಲೇ ಈ ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದು, ಮಹತ್ವದ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್ ಗೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ರೇವಣ್ಣ ಕೋರ್ಟ್ ಮೆಟ್ಟಿಲೇರಿರುವುದು ಕುತೂಹಲ ಮೂಡಿಸಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಪ್ರಜ್ವಲ್ ರೇವಣ್ಣ ಮತ್ತು ತಂದೆ ಎಚ್ಡಿ ರೇವಣ್ಣ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇನ್ನು ಈ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಎ1 ಆರೋಪಿಯಾಗಿದ್ದರೆ, ಪುತ್ರ ಎ2 ಆರೋಪಿಯಾಗಿದ್ದಾರೆ.
ಇನ್ನು ಈ ಪ್ರಕರಣದ ಎಸ್ಐಟಿ ತನಿಖೆ ನಡೆಸಿದ್ದು, ಈಗಾಗಲೇ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ರೇವಣ್ಣ ಆಗಲಿ ಪ್ರಜ್ವಲ್ ಆಗಲಿ ಇದುವರೆಗೂ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಬದಲಿಗೆ ರೇವಣ್ಣ ಕಾನೂನು ತಜ್ಞರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು, ಇದೀಗ ಅಂತಿಮವಾಗಿ ಅವರ ಸಲಹೆ ಮೇರೆಗೆ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ ಕೋರ್ಟ್ಗೆ ಅರ್ಜಿಸಲ್ಲಿಸಿದ್ದಾರೆ.
ಇನ್ನು ರೇವಣ್ಣ ಅವರ ಪುತ್ರ ಎ2 ಆರೋಪಿ ಪ್ರಜ್ವಲ್ ರೇವಣ್ಣ ಇನ್ನೂ ವಿದೇಶದಲ್ಲಿರುವುದರಿಂದ ವಿಚಾರಣೆಗೆ ಏಳು ದಿನ ಕಾಲಾವಕಾಶ ಕೋರಿದ್ದಾರೆ. ಆದ್ರೆ, ಇದಕ್ಕೆ ಎಸ್ ಐಟಿ ನಿರಾಕರಿಸಿದ್ದು, ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.