ಮನೆ ಕಾನೂನು ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಜೈಲು

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಜೈಲು

0

ಮಂಗಳೂರು(Mangalore): ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಮೂರು ವರ್ಷಗಳ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕೊಕ್ಕಡದ ಪದ್ಮನಾಭ ಶಿಕ್ಷೆಗೊಳಗಾದ ಕಾಮುಕನಾಗಿದ್ದು, ಅಪ್ರಾಪ್ತ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದಾಗ ಆಕೆಯನ್ನು ತಡೆದು ದೌರ್ಜನ್ಯ ಎಸಗಿದ್ದ.

ಪ್ರಕರಣ ವಿವರ
2019 ರ ಆ.17 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಳು. ಗೆಳತಿ ಆಕೆಯ ಮನೆಯ ಕಡೆಗೆ ತೆರಳಿದಳು. ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ ಆರೋಪಿ ಲೈಂಗಿಕ ಉದ್ದೇಶದಿಂದ ಆಕೆಯ ಕೈ ಹಿಡಿದು ಎಳೆದಿದ್ದ. ಆಕೆ ಬಿಡಿಸಿಕೊಂಡು ಗೆಳತಿಯ ಮನೆಯ ಕಡೆಗೆ ಹೋಗಿ ಗೆಳತಿಯನ್ನು ಕೂಗಿ ಕರೆದಿದ್ದಳು. ಆಗ ಆಕೆಯ ಗೆಳತಿ ಆಕೆಯ ತಂದೆಗೆ ವಿಷಯ ತಿಳಿಸಿದಳು. ಈ ವೇಳೆ ಆರೋಪಿ ಆಕೆಯ ಮನೆಗೂ ಬಂದು ಆಕೆಯ ತಂದೆಗೆ ಅವಾಚ್ಯವಾಗಿ ಬೈದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿ ತಪ್ಪಿತಸ್ಥನೆಂದು ರುಜುವಾತಾಗಿದೆ ಎಂದು ತೀರ್ಪು ನೀಡಿದ್ದಾರೆ.

ಆರೋಪಿಗೆ ಪೊಕ್ಸೋ ಕಾಯಿದೆಯ ಕಲಂ 12ರಡಿ 3 ವರ್ಷ ಸಾದಾ ಸಜೆ ಮತ್ತು 500 ರೂ. ದಂಡ, ಐಪಿಸಿ ಸೆಕ್ಷನ್‌ 354 (ಡಿ) ಪ್ರಕಾರ 3 ವರ್ಷ ಸಾದಾ ಸಜೆ ಮತ್ತು 500 ರೂ ದಂಡ ಹಾಗೂ ಐಪಿಸಿ 341ರಂತೆ 1 ವರ್ಷ ಸಜೆ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಅವರು ವಾದ ಮಂಡಿಸಿದ್ದರು.