ಕೋಲಾರ ಜಿಲ್ಲೆ ಮುಳಬಾಗಿಲು ಬಳಿಯ ಆವನಿಯಲ್ಲಿರುವ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಕ್ಕೆ ಸೇರಿದ ಶಾರದಾಪೀಠದ ಶಾಖಾ ಮಠ ಬೆಂಗಳೂರಿನಲ್ಲಿದೆ ಅದುವೆ ರಾಜಾಜಿನಗರ, ಬಸವೇಶ್ವರ ನಗರ ಬಳಿಯ ಮಹಾಲಕ್ಷ್ಮೀಪುರದ ಶಂಕರಮಠ.
ಈ ಮಠದ ಪ್ರಾಂಗಣದಲ್ಲಿ ಶ್ರೀಶಾರದಾಂಬಾ, ಶ್ರೀ ಗಣಪತಿ ಮತ್ತು ಶಂಕರಾಚಾರ್ಯರ ದೇವಾಲಯಗಳಿವೆ. ಸಂಸ್ಥಾನದ 21ನೇ ಜಗದ್ಗುರುಗಳಾದ ಶ್ರೀ ಅಭಿನವೋದ್ಧಂಡ ವಿದ್ಯಾರಣ್ಯ ಭಾರತೀ ಮಹಾಸ್ವಾಮೀಜಿಯವರು 1975ರಲ್ಲಿ ಪ್ರತಿಷ್ಠಾಪಿಸಿದ ಈ ದೇವಾಲಯ ಪವಿತ್ರ ಕ್ಷೇತ್ರವಾಗಿ ಭಕ್ತಕೋಟಿಯನ್ನು ಕೈಬೀಸಿ ಕರೆಯುತ್ತಿದೆ.
ನವರಂಗ್ ಚಿತ್ರಮಂದಿರದಿಂದ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಬಂದರೆ ಬಸವೇಶ್ವರ ನಗರ ಸಂಪರ್ಕಿಸುವ ಮುಖ್ಯರಸ್ತೆಯ ಅಂಚಿನಲ್ಲಿ ಈ ಭವ್ಯಮಠ ಕಾಣಿಸುತ್ತದೆ.
ಇತ್ತೀಚಿನ ಕಟ್ಟಡದಲ್ಲಿರುವ ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮಧ್ಯದ ಪ್ರಧಾನ ಗರ್ಭಗುಡಿಯಲ್ಲಿ ತಾಯಿ ಶಾರದೆಯ ಸುಂದರ ವಿಗ್ರಹವಿದ್ದರೆ, ತಾಯಿಯ ಬಲಭಾಗದಲ್ಲಿ ವಿಘ್ನನಿವಾರಕ ಗಣಪತಿಯ ವಿಗ್ರಹವಿದೆ. ಎಡ ಭಾಗದಲ್ಲಿ ಶಂಕರ ಭಗವತ್ಪಾದರ ಪ್ರತಿಮೆಯಿದೆ.
ಪ್ರಸ್ತುತ ದೇವಸ್ಥಾನ ಹಾಗೂ ಗುರುಭವನ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು ಪ್ರಗತಿಯಲ್ಲಿದೆ. ದೇವಾಲಯದಲ್ಲಿ ಪ್ರತಿ ತಿಂಗಳು ಸಂಕಷ್ಟ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ವ್ರತಾಚರಣೆಗಳು ನಡೆಯುತ್ತವೆ.
ಹಬ್ಬ ಹರಿದಿನಗಳಂದು ಹಾಗೂ ಪ್ರತಿ ಶುಕ್ರವಾರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ದಶಮಿಯವರೆಗೆ ಪ್ರತಿನಿತ್ಯ ಮಹಾನ್ಯಾಸಪೂರ್ವಕ ಏಕಾದಶ ರುದ್ರಾಭಿಷೇಕ, ವೇದತ್ರಯ ಭಾಷ್ಯತ್ರಯ ಶ್ರೀದೇವಿ ಭಾಗವತ ಸಹಿತ ದುರ್ಗಾ ಸಪ್ತಶತಿ, ಲಲಿತೋಪಾಖ್ಯಾನ, ಶ್ರೀ ವಾಲ್ಮೀಕಿ ರಾಮಾಯಣ ಪಾರಾಯಣ ನಡೆಯುತ್ತದೆ. ಮಹಾನವಮಿಯಂದು ಶ್ರೀ ಚಂಡಿಕಾ ಹೋಮಾ ಹಾಗೂ ವಿಜಯದಶಮಿಯಂದು ಶ್ರೀರಾಮಪಟ್ಟಾಭಿಷೇಕ ಇಲ್ಲಿ ಜರುಗುತ್ತದೆ.
ಪ್ರತಿ ದಿನ ದೇವಿಗೆ ದುರ್ಗೆ, ರಾಜೇಶ್ವರಿ ಮೊದಲಾದ ಅಲಂಕಾರಗಳನ್ನು ಮಾಡಲಾಗುತ್ತದೆ. ಗಾನಪ್ರಿಯಳಾದ ಶಾರದಾದೇವಿ ಸನ್ನಿಧಿಯಲ್ಲಿ ಹತ್ತೂ ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಏಕಾದಶಿಯ ದಿನ ಉಯ್ಯಾಲೋತ್ಸವವೂ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ಮಠೀಯ ಕಾರ್ಯದರ್ಶಿಗಳಾದ ಡಿ. ಅವಧೂತ್ ಅವರನ್ನು ದೂರವಾಣಿ 23491418 ಅಥವಾ 23497899 ಮೂಲಕ ಸಂಪರ್ಕಿಸಬಹುದು.
ದೇವಾಲಯದ ವಿಳಾಸ: ಶ್ರೀ ಶಾರದಾ ಪೀಠಂ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮೀಪುರಂ, ಬೆಂಗಳೂರು – 560086.