‘ಭಾರತದ ಕೋಗಿಲೆ’ಎಂದು ಖ್ಯಾತರಾಗಿದ್ದ ಸರೋಜಿನಿ ನಾಯ್ಡು (Sarojini naydu) ಜೀವನದ ಕುರಿತು ಈಗ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿರುವ ಈ ಬಯೋಪಿಕ್ಗೆ ಕನ್ನಡಿಗ ವಿನಯ್ ಚಂದ್ರ ಅವರು ನಿರ್ದೇಶನ ಮಾಡಲಿದ್ದಾರೆ.
ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಚರಣ್ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಅವರು ಜೊತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸಲಾಗುತ್ತಿದೆ. ಸರೋಜಿನಿ ನಾಯ್ಡು ಅವರ ಯೌವನದ ಪಾತ್ರದಲ್ಲಿ ಸೋನಲ್ ಮಾಂತೆರೋ (Sonal Monteiro) ನಟಿಸಲಿದ್ದಾರೆ. ಹಿರಿ ವಯಸ್ಸಿನ ಪಾತ್ರದಲ್ಲಿ ಅನುಭವಿ ಕಲಾವಿದೆ ಶಾಂತಿಪ್ರಿಯಾ (Shantipriya) ಅಭಿನಯಿಸಲಿದ್ದಾರೆ. ಸರೋಜಿನಿ ನಾಯ್ಡು ಪತಿಯ ಪಾತ್ರಕ್ಕೆ ಬಾಲಿವುಡ್ ಕಲಾವಿದ ಹಿತೇನ್ ತೇಜ್ವಾನಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಸರೋಜಿನಿ ನಾಯ್ಡು ಬಯೋಪಿಕ್ ಬಗ್ಗೆ ಕೌತುಕ ಮೂಡಿದೆ.
ಅಕ್ಷಯ್ ಕುಮಾರ್ ವೃತ್ತಿಜೀವನದಲ್ಲಿ ಮೊದಲ ಬಾರಿ ಹೀರೋ ಆಗಿ ನಟಿಸಿದ್ದ ‘ಸೌಗಂಧ್’ ಚಿತ್ರಕ್ಕೆ ನಾಯಕಿ ಆಗಿದ್ದರು ಶಾಂತಿ ಪ್ರಿಯಾ. ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದರು. ಕಳೆದ ಹಲವು ವರ್ಷಗಳಿಂದ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. 28 ವರ್ಷಗಳ ನಂತರ ಶಾಂತಿಪ್ರಿಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದು ಕೂಡ ಕನ್ನಡದ ಸಿನಿಮಾ ಮೂಲಕ ಎಂಬುದು ವಿಶೇಷ.
ಸರೋಜಿನಿ ನಾಯ್ಡು ಬಗ್ಗೆ ಕಳೆದ 8 ವರ್ಷಗಳಿಂದ ಅಧ್ಯಯನ ಮಾಡಿರುವ ಧೀರಜ್ ಮಿಶ್ರಾ ಅವರು ಈ ಸಿನಿಮಾಗೆ ಬರಹಗಾರರಾಗಿದ್ದಾರೆ. ‘ಸರೋಜಿನ ಅವರು ಆಗಿನ ಕಾಲಕ್ಕೆ ಸ್ಕಾಲರ್ಶಿಪ್ ಪಡೆದು ಲಂಡನ್ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 50 ಡಿಗ್ರಿ ಬಿಸಿಲಿನಲ್ಲೂ ಮೂರು ದಿನಗಳ ಕಾಲ ನೀರು ಕುಡಿಯದೇ ಹೋರಾಟ ಮಾಡಿದರು. ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು’ ಎಂದು ತಮ್ಮ ಆಶಯವನ್ನು ತಿಳಿಸಿದ್ದಾರೆ ಧೀರಜ್ ಮಿಶ್ರಾ.
ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ವಿಜಯ್ ಚಂದ್ರ ಅವರು ವಹಿಸಿಕೊಂಡಿದ್ದಾರೆ. ‘1878ರಿಂದ 1949ರ ಕಾಲಘಟ್ಟದಲ್ಲಿ ಈ ಚಿತ್ರ ನಡೆಯುತ್ತದೆ. ಬೆಂಗಳೂರು, ಮುಂಬೈ, ಉತ್ತರ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್ ಆಗಲಿದೆ. ಸರೋಜಿನಿ ನಾಯ್ಡು ಅವರ ಕುಟುಂಬದ ಒಪ್ಪಿಗೆ ಪಡೆದುಕೊಂಡಿದ್ದೇವೆ. ಸರೋಜಿನಿ ಅವರ ಬಗ್ಗೆ ಜನರಿಗೆ ಗೊತ್ತಿಲ್ಲದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಇನ್ನುಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನೂ ಪೂರ್ತಿಯಾಗಿಲ್ಲ’ ಎಂದು ವಿಜಯ್ ಚಂದ್ರ ಹೇಳಿದ್ದಾರೆ.