ಮನೆ ಸುದ್ದಿ ಜಾಲ ಸತ್ತ ಕಾಡು ಪ್ರಾಣಿಗಳಿಗೆ ಹಾಕುವಷ್ಟಾದರೂ ದಲಿತರ ಕಷ್ಟಕ್ಕೂ ಕಣ್ಣೀರು ಹಾಕಿ: ಸಿದ್ದರಾಜು

ಸತ್ತ ಕಾಡು ಪ್ರಾಣಿಗಳಿಗೆ ಹಾಕುವಷ್ಟಾದರೂ ದಲಿತರ ಕಷ್ಟಕ್ಕೂ ಕಣ್ಣೀರು ಹಾಕಿ: ಸಿದ್ದರಾಜು

0
ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ)ಯ ಸಭೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ರವರು ನೂತನ ಜಿಲ್ಲಾ ಸಂಘಟನಾ ಸಂಚಾಲಕರಾಗಿ ನೇಮಕಗೊಂಡ ಸಿ. ಪುಟ್ಟಮಲ್ಲಯ್ಯರವರಿಗೆ ಅಭಿನಂದಿಸಿದರು.

ಯಳಂದೂರು: ನಮ್ಮನ್ನಾಳುವ ಸರ್ಕಾರಗಳು ದಲಿತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದೆ. ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ನಡೆಯುತ್ತಿದ್ದರೂ ಇದಕ್ಕೆ ತಕ್ಕ ಶಾಸ್ತಿಯಾಗುತ್ತಿಲ್ಲ. ಕಾಡಿನಲ್ಲಿ ಕಾಡುಪ್ರಾಣಿಗಳು ಸತ್ತರೆ ಸರ್ಕಾರದ ಹೃದಯ ಮಿಡಿಯುತ್ತದೆ ಹಾಗಾದರೆ ನಾವು ಕಾಡುಪ್ರಾಣಿಳಿಂತಲೂ ಕಡೆಯಾದವರೇ? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಪ್ರಶ್ನಿಸಿದರು.

ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ನಮ್ಮ ಬದುಕು ತುಂಬಾ ಹೀನ ಸ್ಥಿತಿಯಲ್ಲಿರುತ್ತಿತ್ತು. ಆದರೆ ನಮ್ಮನ್ನು ನಮ್ಮ ಸಂವಿಧಾನ ಕಾಪಾಡುತ್ತಿದೆ. ಆದರೂ ಕೂಡ ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಲೇ ಇದೆ. ನಮ್ಮನ್ನಾಳುವ ಸರ್ಕಾರಗಳು ಕಣ್ಣೀರು ಒರೆಸುವ ನಾಟಕವಾಡುತ್ತಾರೆ. ಆದರೆ ನಿಜವಾಗಿ ನಮಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿವೆ. ಹಾಗಾಗಿ ನಾವು ಇದರ ವಿರುದ್ಧ ಹೋರಾಡಬೇಕಿದೆ. ನಮ್ಮ ಸಂಘಟನೆಯನ್ನು ಬಲ ಗೊಳಿಸುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಗೆ ನಮ್ಮ ಸಮಿತಿಯ ನೂತನ ಸಂಘಟನಾ ಸಂಚಾಲಕರಾಗಿ ಸಿ. ಪುಟ್ಟಮಲ್ಲಯ್ಯರನ್ನು ನೇಮಕ ಮಾಡಲಾಗುತ್ತಿದೆ. ಇವರು ಈ ಹಿಂದೆ ಕೇಂದ್ರ ತಂಬಾಕು ಮಂಡಳಿಯಲ್ಲಿ ನೌಕರರಾಗಿದ್ದು ಈಗ ನಿವೃತ್ತರಾಗಿದ್ದಾರೆ. ಆದರೂ ಕೂಡ ಸಂಘಟನೆಯಲ್ಲಿ ತೊಡಗಿಕೊಂಡು ಸೇವೆ ಮಾಡುವ ಪ್ರಾಮಾಣಿಕ ಉದ್ದೇಶವಿದ್ದು ಇವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ನೂತನ ಜಿಲ್ಲಾ ಸಂಘಟನಾ ಸಂಚಾಲಕ ಸಿ. ಪುಟ್ಟಮಲ್ಲಯ್ಯ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ದಲಿತರೇ ಹೆಚ್ಚಾಗಿದ್ದಾರೆ. ಈ ಸಂಘಟನೆಯ ಮೂಲಕ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಹೋರಾಟಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇದರೊಂದಿಗೆ ಸರ್ಕಾರದಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಹೋರಾಟದ ಮೂಲಕ ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶವಿದೆ. ನಮ್ಮ ಜಿಲ್ಲೆಯಲ್ಲೂ ದಲಿತರ ವಿರುದ್ಧ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಇವೆಲ್ಲದರ ವಿರುದ್ಧ ಹೋರಾಡಲು ಜಿಲ್ಲೆಯಲ್ಲಿ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಲು ನಾನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ಮಾಂಬಳ್ಳಿ ಹಿಂಡಯ್ಯ, ಚಿಕ್ಕದೊಡ್ಡಯ್ಯ, ಹನೂರು ಮುರುಗೇಶ್, ನಾಗಣ್ಣ, ಶಾಂತರಾಜು, ಈರತಯ್ಯ, ನಾರಾಯಣಸ್ವಾಮಿ, ಮಾಂಬಳ್ಳಿ ಬಸವರಾಜು, ಮರಿಸ್ವಾಮಿ, ಮರಪ್ಪ, ಯರಿಯೂರು ಶ್ರೀನಿವಾಸ್, ಶಿವಣ್ಣ, ನಂಜುಂಡಸ್ವಾಮಿ, ಮಾಂಬಳ್ಳಿ ರಾಜಣ್ಣ, ಅಗರ ರಾಚಪ್ಪ, ಮಹದೆವಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.