ಚಿಕ್ಕೋಡಿ: ಕನ್ನಡ ರಾಜ್ಯೋತ್ಸವದ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಿಸಲು ಆಚರಿಸಲು ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದರು.
ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಹಾರಾಷ್ಟ್ರದ ಗಡಿಯಲ್ಲೇ ತಡೆಯಲಾಯಿತು. ಪೊಲೀಸರು ವಾಹನದಲ್ಲಿ ವಾಪಸ್ ಕಾಗಲ್ ಗೆ ಕರೆದುಕೊಂಡು ಹೋದರು.
ಶಿವಸೇನೆ ಉದ್ಧವ್ ಠಾಕ್ರೆ ಬಣ ಗಡಿ ವಿವಾದದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಶಿವಸೇನೆ ಪುಂಡರು ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಅರ್ಧ ಗಂಟೆ ಹೈಡ್ರಾಮಾ ಸೃಷ್ಟಿಸುತ್ತಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಹೊರವಲಯದಲ್ಲಿ ಶಿವಸೇನೆ ಪುಂಡರು ಇಂದು ಅರ್ಧಗಂಟೆ ಕಾಲ ಕರ್ನಾಟಕ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಘೋಷಣೆ ಹಾಕಿದರು.
ಮಹಾರಾಷ್ಟ್ರದ ಮೂರು ಜನ ಸಚಿವರು ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಾಯಕರನ್ನು ತಡೆಯಲು ಗಡಿ ಭಾಗದಲ್ಲಿ 18 ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ.
ಮಹಾರಾಷ್ಟ್ರದ ನಾಯಕರು ಗಡಿ ಪ್ರವೇಶಕ್ಕೆ ಯತ್ನಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರಾಳ ದಿನ ಆಚರಣೆ ಹೆಸರಲ್ಲಿ ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಎಚ್ಚರಿಕೆ ನೀಡಿದ್ದಾರೆ.