ಮೈಸೂರು : ಕಾಯಕವೇ ಕೈಲಾಸ, ಜಗತ್ತಿನ ಎಲ್ಲ ಮನುಷ್ಯರು ಸಮಾನರು ಎಂದು ಸಾರಿದ ಜಗಜ್ಯೋತಿ ಬಸವೇಶ್ವರರು ಮತ್ತು ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಮೂಲಕ ಮೈಸೂರು ಸಂಸ್ಥಾನವನ್ನು ವಿಶ್ವ ಮಾನ್ಯವನ್ನಾಗಿ ಮಾಡಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ಜಯಂತಿಯನ್ನು ಪೌರಕಾರ್ಮಿಕರೊಂದಿಗೆ ಸಹ ಪಂಕ್ತಿ ಭೋಜನ ಮಾಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮೈಸೂರು ಹೊರವಲಯದ ಹೂಟಗಳ್ಳಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಸಾಮಾಜಿಕ ಮೌಲ್ಯವುಳ್ಳು ಈ ಸುಂದರ ಕಾರ್ಯಕ್ರಮದಲ್ಲಿ ೪೦೦ಕ್ಕೂ ಹೆಚ್ಚು ಪೌರಕಾರ್ಮಿಕರು ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಗಣ್ಯರು ಬಟ್ಟೆ ವಿತರಣೆ ಮಾಡಿದರಲ್ಲದೇ, ಅವರೊಂದಿಗೆ ಕುಳಿತು ಭೋಜನವನ್ನೂ ಮಾಡಿದ್ದು, ಕಾರ್ಯಕ್ರಮದ ವಿಶೇಷವಾಗಿತ್ತು. ಶಾಸಕರಾದ ಜಿ.ಟಿ.ದೇವೇಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರು ಈ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ದಿನನಿತ್ಯ ತಮ್ಮ ವೃತ್ತಿಯಲ್ಲಿ ಅವರು ಬಸವಣ್ಣನವರ ಕಾಯಕ ತತ್ವವನ್ನು ಅನುಸರಿಸುತ್ತಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ನಗರ ಇಂದು ಜಗತ್ಪ್ರಸಿದ್ಧವಾಗಲು ಪೌರಕಾರ್ಮಿಕರ ಅಪಾರ ಶ್ರಮ, ಸೇವೆ ಪ್ರಮುಖ ಕಾರಣ ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಶೇಖರ್ ಅವರು ಪೌರಕಾರ್ಮಿಕರ ಜತೆ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡುವ ಮೂಲಕ ಪೌರಕಾರ್ಮಿಕರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿರುವುದು ಶ್ಲಾಘನೀಯ, ಅಲ್ಲದೇ ೪೦೦ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಸೀರೆ ಮತ್ತು ಪ್ಯಾಂಟು ಶರ್ಟುಗಳನ್ನು ಕೊಡಿಸಿ ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕವೀಶ್ ಗೌಡ ಅವರು ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಪೌರಕಾರ್ಮಿಕರು ಕಾಯಕ ಜೀವಿಗಳು ಅವರು ಒಂದು ದಿನ ಕೆಲಸ ಮಾಡದಿದ್ದರೆ ಜಗತ್ತು ಸ್ತಬ್ದವಾಗುತ್ತದೆ. ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು, ಮೈಸೂರು ನಗರಕ್ಕೆ ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂದು ಹೆಸರು ಬರಲು ಪೌರಕಾರ್ಮಿಕರ ಶ್ರಮ ಕಾರಣ, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಹೂಟಗಳ್ಳಿ ನಗರಸಭೆ ಪೌರಾಯುಕ್ತರಾದ ಚಂದ್ರಶೇಖರ್ ಅವರು ಮಾತನಾಡಿ, ಸಾರ್ವಜನಿಕರು ಪೌರಕಾರ್ಮಿಕರೆಂದರೆ ಅಸಡ್ಡೆ ಮಾಡುವುದನ್ನು ಬಿಡಬೇಕು. ಅವರು ಇರುವುದೇ ಕಸ ತೊಡೆಯಲು ಎಂಬ ಮನೋಭಾವ ಬಿಟ್ಟು ನಮ್ಮಂತೆಯೇ ಅವರು ಎಂದು ಕಾಣಬೇಕು. ಹೂಟಗಳ್ಳಿ ನಗರಸಭೆಯಲ್ಲಿ ಪ್ರತಿನಿತ್ಯ ೪೦ ಟನ್ ಕಸ ಉತ್ಪಾದನೆ ಆಗುತ್ತದೆ.ಅದರ ನಿರ್ವಹಣೆ ಒಂದು ಸವಾಲಾಗಿದೆ. ಮನೆಯಲ್ಲೆ ಹಸಿ ಕಸ, ಒಣ ಕಸ ಬೇರ್ಪಡಿಸಿ ಎಂದರೆ ಯಾರೂ ಕೇಳುವುದಿಲ್ಲ. ಇದೆಲ್ಲವನ್ನೂ ಪೌರಕಾರ್ಮಿಕರು ನಿಭಾಯಿಸುವ ಮೂಲಕ ನಗರವನ್ನು ಸ್ವಚ್ಛವಾಗಿಟ್ಟಿದ್ದಾರೆ ಎಂದರು. ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಬಸವಣ್ಣನವರ ಕಾಯಕ ತತ್ವದಲ್ಲಿಯೇ ತಮ್ಮ ಬದುಕು ರೂಪಿಸಿಕೊಂಡಿರುವ ಪೌರಕಾರ್ಮಿಕರು ನಿಜವಾದ ಕಾಯಕ ಯೋಗಿಗಳು, ಇಂತಹವರನ್ನು ಗುರುತಿಸಿ ಗೌರವಿಸುತ್ತಿರುವ ರಾಜಶೇಖರ್ ಮತ್ತವರ ತಂಡ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವ್, ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್, ಸೆಸ್ಕ್ ಎಇ ಕೆ.ಕೆ.ಲಕ್ಷ್ಮೀಶ್, ಮೈಸೂರು ಸೈನಿಕ್ ಅಕಾಡೆಮಿಯ ಶ್ರೀಧರ್ ಮತ್ತಿತರ ಗಣ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಡಿಪಿಕೆ ಪರಮೇಶ್, ಗಿರೀಶ್, ಯೋಗೇಶ್, ಕಾಯಿ ಶಿವಣ್ಣ, ಸಿಂಧುವಳ್ಳಿ ಶಿವಕುಮಾರ್, ಕಾಂತರಾಜ್ ಪಾಟೀಲ್, ಲೋಕೇಶ್, ಮಂಜುಳ ಮತ್ತಿತರರು ಉಪಸ್ಥಿತರಿದ್ದು, ಗಣ್ಯರು ಇವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ೪೦೦ಕ್ಕೂ ಹೆಚ್ಚು ಪೌರಕಾರ್ಮಿಕರು, ಗ್ರಾಪಂ ನೌಕರರಿಗೆ ಸೀರೆ ಮತ್ತು ಪ್ಯಾಂಟು ಶರ್ಟುಗಳನ್ನು ವಿತರಣೆ ಮಾಡಲಾಯಿತು. ಬಳಿಕ ಗಣ್ಯರು ಪೌರಕಾರ್ಮಿಕರ ಜತೆ ಸಹಪಂಕ್ತಿ ಭೋಜನದಲ್ಲಿ ಭಾಗವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ರಾಜಶೇಖರ್ ಮತ್ತಿತರರ ಜತೆಗೂಡಿ ಪೌರಕಾರ್ಮಿಕರಿಗೆ ಊಟ ಬಡಿಸಿದರೆ, ವಿದ್ಯಾ ವಿಕಾಸ ಸಂಸ್ಥೆಯ ಮುಖ್ಯಸ್ಥರಾದ ಕವೀಶ್‌ಗೌಡ ಮತ್ತಿತರ ಗಣ್ಯರು ಪೌರಕಾರ್ಮಿಕರ ಜತೆ ಕುಳಿತು ಊಟ ಮಾಡಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯು ಬಸವೇಶ್ವರರ ಕಾಯಕ ತತ್ವ ಮತ್ತು ಸಮಾನತೆಯ ಆಧಾರದಲ್ಲಿ ಸರ್ವ ಜನಾಂಗಕ್ಕೂ ಒಳಿತನ್ನು ಬಯಸಿ ಸಮಾಜದಲ್ಲಿ ಸಂಘಟನೆಯ ರೂಪದಲ್ಲಿ ಕೆಲಸ ಮಾಡುತ್ತಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿನ ಸರ್ವ ಜನಾಂಗಕ್ಕೂ ಅನುಕೂಲವಾಗುವ ರೀತಿಯಲ್ಲಿ ಮಾಡಿದ ಅಭಿವೃದ್ಧಿಗಳು ನಮ್ಮ ಸಂಘಟನೆಗೆ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಈ ಸಮಾಜ ಮತ್ತು ನಾಡಿನ ಅಭಿವೃದ್ಧಿಗೆ ಎಲೆ ಮರೆಯ ಕಾಯಿಯಂತೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಕಾಯಕಯೋಗಿಗಳಾದ ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸಿ ಅವರಿಗೆ ನಮ್ಮ ಕಾಣಿಕೆಯನ್ನು ಸಲ್ಲಿಸಿ ಅವರ ಜತೆ ಊಟ ಮಾಡುವ ಮೂಲಕ ಈ ಸಮಾಜ ನಿಮ್ಮೊಂದಿಗಿದೆ ಎಂದು ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಈ ಕಾರ್ಯಕ್ರಮ ರೂಪಿಸಿದ್ದೇವೆ.
-ಬಿ.ಬಿ.ರಾಜಶೇಖರ್, ಅಧ್ಯಕ್ಷರು, ಕನ್ನಡಾಂಬೆ ರಕ್ಷಣಾ ವೇದಿಕೆ