2020ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ ನಟ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ನ ಮುಂದುವರಿದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಇದೇ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ.
ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಕೊಲೆ ಪ್ರಕರಣದ ಸುತ್ತ ನಡೆಯುವ ಕುತೂಹಲಕಾರಿ ಕಥಾಹಂದರದಿಂದ ಕೂಡಿದೆ. ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಮತ್ತು ‘ಮಾಯಾವಿ’ ಪಾತ್ರ ಯಾವುದು ಎಂಬುದೇ ಈ ಚಿತ್ರದ ಹೂರಣ ಎಂದರು ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ.
ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ ಎಂದರು ನಿರ್ದೇಶಕರು.
‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ.