ಶಿವಮೊಗ್ಗ: ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಸಿದ್ದಾಪುರದ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ, ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತನಾಗಿರುವ ಗೋಕುಲ್ ಹಲ್ಲೆಗೊಳಗಾದವರು.
ಭದ್ರಾವತಿಯಲ್ಲಿ ಇಸ್ಪಿಟ್ ಹಾವಳಿ ಹೆಚ್ಚಾಗಿದೆ ಎಂದು ಗೋಕುಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಗೆಲ್ಲುವ ಮುಂಚೆ ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ, ಎಂಪಿಎಂ ಪ್ರಾರಂಭಿಸುತ್ತೇನೆ ಎಂದ ಶಾಸಕರೇ ಈಗ ಯಾಕೆ ಇಸ್ಪಿಟ್ ಹಾವಳಿ ತಡೆಗಟ್ಟುತ್ತಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಪ್ರಶ್ನಿಸಿ ಪೋಸ್ಟ್ ಮಾಡಿದ್ದರು.
ಪೋಸ್ಟ್ ಮಾಡಿರುವುದನ್ನು ಖಂಡಿಸಿ, ಬೆಳಿಗ್ಗೆ ಗೋಕುಲ್ ಕಾರಿನ ಮೇಲೆ ಹಲ್ಲೆ ನಡೆಸಲಾಗಿತ್ತು. ಗೋಕುಲ್ ಕಾರಿನ ಗಾಜು ಹೊಡೆದಿದ್ದರು. ರಾತ್ರಿ ಕಿಡಿಗೇಡಿಗಳು ಗೋಕುಲ್ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ತಲೆ ಹಾಗೂ ಕಿವಿಗೆ ಗಾಯವಾಗಿದೆ.
ಬಿ ವೈ ವಿಜಯೇಂದ್ರ ಆಕ್ರೋಶ
ಘಟನೆ ಸಂಬಂಧ ಎಕ್ಸ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಸ್ಥ ಕಾಂಗ್ರೆಸ್ಸಿಗರ ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.















