ಮನೆ ರಾಜ್ಯ ಶಿವಮೊಗ್ಗ: 6 ದಶಕದ ಕಾಯುವಿಕೆಗೆ ಕೊನೆ : ನಿತಿನ್ ಗಡ್ಕರಿ ಪ್ರತೀಕಾತ್ಮಕವಾಗಿ ‘ಸಿಗಂದೂರು ಸೇತುವೆ’ ಲೋಕಾರ್ಪಣೆ

ಶಿವಮೊಗ್ಗ: 6 ದಶಕದ ಕಾಯುವಿಕೆಗೆ ಕೊನೆ : ನಿತಿನ್ ಗಡ್ಕರಿ ಪ್ರತೀಕಾತ್ಮಕವಾಗಿ ‘ಸಿಗಂದೂರು ಸೇತುವೆ’ ಲೋಕಾರ್ಪಣೆ

0

ಶಿವಮೊಗ್ಗ : ಶರಾವತಿ ಹಿನ್ನೀರು. ಮಲೆನಾಡಿನ ಸೌಂದರ್ಯದ ಕಿರೀಟ. ಆದರೆ ಇದೇ ಹಿನ್ನೀರು, ಅಂಬಾರಗೋಡ್ಲು ಮತ್ತು ಕಳಸವಳ್ಳಿ ಭಾಗದ ಜನರಿಗೆ ದಶಕಗಳಿಂದ ಒಂದು ಶಾಪವೂ ಆಗಿತ್ತು. ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಲಾಂಚ್ ಅಥವಾ ಬಾರ್ಜ್‌ಗಳೇ ಆಧಾರವಾಗಿದ್ದವು. ಈ ಎಲ್ಲಾ ಸಂಕಷ್ಟಗಳಿಗೆ, ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಒಂದು ಸೇತುವೆ, ಆ ಕಾಯುವಿಕೆಯ ಯುಗಕ್ಕೆ ಅಂತ್ಯ ಹಾಡಿ, ನಿರಂತರ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಿದೆ.

6 ದಶಕಗಳ ಹೋರಾಟದ ಫಲವಾಗಿರುವ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದೆ. ಟೇಪ್ ಕತ್ತರಿಸುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಿಗಂದೂರು ಸೇತುವೆ ಉದ್ಘಾಟನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ನಾಯಕರ ಗೈರಿನ ನಡುವೆ ಸೇತುವೆ ಲೋಕಾರ್ಪಣೆಗೊಂಡಿದೆ. ಲೋಕಾರ್ಪಣೆ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಿತಿನ್​ ಗಡ್ಕರಿ ದೇವಿಯ ದರ್ಶನ ಪಡೆದಿದ್ದಾರೆ. ಲೋಕಾರ್ಪಣೆಗೂ ಮುನ್ನ ಸೇತುವೆಯ ಸುರಕ್ಷತೆಗೆ ಪ್ರಾರ್ಥಿಸಿ ಸ್ಥಳೀಯರು ಗಣ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

ಸೇತುವೆಯನ್ನು ಸ್ಥಳೀಯರು ಮಾವಿನ ತೋರಣ-ತಳಿರುಗಳಿಂದ ಅಲಂಕರಿಸಿದ್ದರು, ತುಮರಿ, ಬ್ಯಾಕೋಡು, ಸಿಗಂದೂರು, ಕಳಸವಳ್ಳಿ ಭಾಗದ ದ್ವೀಪದ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಛತ್ರಿಗಳ ಹಿಡಿದು, ರೇನ್ ಕೋಟ್, ಜರ್ಕಿನ್ ಧರಿಸಿ ಬಂದು ಲೋಕಾರ್ಪಣೆಯ ಕ್ಷಣ ಕಣ್ತುಂಬಿಕೊಂಡರು. ತಮ್ಮ ದಶಕಗಳ ಸಂಕಷ್ಟ ಪರಿಹಾರವಾಗಿದ್ದು ಕಂಡು ಪುಳಕಗೊಂಡರು. ಸೇತುವೆಯ ಎರಡೂ ಬದಿಯಲ್ಲಿ ಛತ್ರಿ ಹಿಡಿದು ಓಡಾಡಿ ಸಂತಸಗೊಂಡರು.