ಬೆಂಗಳೂರು: ಕರ್ನಾಟಕದ ರಾಜಕೀಯ ವಲಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಸಚಿವ ಶಿವಾನಂದ ಪಾಟೀಲ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಕೆಲವು ದಿನಗಳಿಂದ ಸಚಿವ ಶಿವಾನಂದ ಪಾಟೀಲರಿಗೆ ಸದನದಿಂದ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವಂತೆ ಸವಾಲು ಹಾಕಿದ್ದರು. ಈ ಸವಾಲಿಗೆ ಪ್ರತಿಕ್ರಿಯೆಯಾಗಿ ಸಚಿವ ಪಾಟೀಲ ಅವರು ಇಂದು ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆದರೆ ಸ್ಪೀಕರ್ ಯುಟಿ ಖಾದರ್ ಅವರು ಈ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ. “ಶಿವಾನಂದ ಪಾಟೀಲ ಅವರು ಷರತ್ತುಬದ್ಧ ರಾಜೀನಾಮೆ ನೀಡಿದ್ದಾರೆ. ಕಾನೂನು ಪ್ರಕಾರ ಈ ರೀತಿಯ ರಾಜೀನಾಮೆಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ,” ಎಂದು ಖಾದರ್ ಹೇಳಿದ್ದಾರೆ. “ರಾಜೀನಾಮೆ ಸ್ವಂತ ಇಚ್ಛೆಯಿಂದ, ಸ್ಪಷ್ಟವಾಗಿದ್ದು, ಯಾವುದೇ ಬಲವಂತವಿಲ್ಲದೆ ಸಲ್ಲಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ರಾಜೀನಾಮೆ ಒಂದು ರಾಜಕೀಯ ಸವಾಲಿನ ಫಲವಾಗಿ ಸಲ್ಲಿಕೆಯಾಗಿರುವುದು ಕಂಡುಬರುತ್ತಿದೆ. ಹೀಗಾಗಿ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ.”
ಅಲ್ಲದೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಶಾಸಕ ಸ್ಥಾನಕ್ಕೆ ಇನ್ನು ರಾಜಿನಾಮೆ ನೀಡಿಲ್ಲ. ಹಾಗಾಗಿ ಶಿವಾನಂದ್ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ ಅದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟಪಡಿಸಿದರು.














