ಮೈಸೂರು: ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಿ ತಮ್ಮ ತತ್ವಗಳ ಮೂಲಕ ಬೆಳಕನ್ನು ಚೆಲ್ಲಿದವರು ಶಂಕರಚಾರ್ಯರು ಎಂದು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ವತ್ಸ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಅವರು ನೀಡುತ್ತಿದ್ದ ಗೌರವ ಅಪಾರವಾದದ್ದು, ಮಹಿಳೆಯರಿಗೆ ಹೆಚ್ಚು ಒತ್ತನ್ನು ನೀಡಿ ಮಹಿಳೆಯರು ಸಮಾಜದಲ್ಲಿ ಒಟ್ಟಾಗಿ ಇರಬೇಕು. ಅವರೂ ಸಹ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು ಎಂದು ಹೇಳಿದವರು ಶಂಕರಚಾರ್ಯರು ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ಪಡೆದುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದವರು. ದೇಶದ ಉದ್ದದಗಲಕ್ಕೂ ಪರ್ಯಟನೆ ಮಾಡಿ ತಮ್ಮ ಕಾಲ್ನಡಿಗೆಯಲ್ಲಿಯೇ ೪ ಪೀಠಗಳನ್ನು ಸ್ಥಾಪನೆ ಮಾಡಲು ಹೊರಟ ಮಹಾನುಭಾವ ಶಂಕರ ಚಾರ್ಯರು ಎಂದು ಹೇಳಿದರು.
ಶ್ರೀ ರಾಮಕೃಷ್ಣ ಆಶ್ರಮ, ವಿವೇಕಪ್ರಭ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ.ಶ್ರೀ ಸ್ವಾಮಿ ಜ್ಞಾನಯೋಗಾನಂದ ಮಹಾರಾಜ್ ಅವರು ಮಾತನಾಡಿ ವೇದ ವೇದಗಳ ಮಹತ್ವವನ್ನು ಭಾರತದ ಐತಿಹಾಸಿಕ ಸನ್ನಿವೇಶದಲ್ಲಿ ಪುನರ್ ಸ್ಥಾಪನೆ ಮಾಡಿದವರು ಶಂಕರಚಾರ್ಯರು ಎಂದು ಹೇಳಿದರು. ಆಧ್ಯಾತ್ಮಿಕ ಪರಂಪರೆಗೆ ಇವರ ಕೊಡುಗೆ ಅಪಾರವಾಗಿದ್ದು, ತಮ್ಮ ಅಭೂತಪೂರ್ವಾದ ಜೀವನದಲ್ಲಿ ಭಾರತದ ಅಸ್ತಿತತೆಯನ್ನು ಎತ್ತಿ ಹಿಡಿದರು. ಇವರ ತತ್ವಗಳು, ಜೀವನದ ಸಂದೇಶಗಳು ಹೆಚ್ಚು ಜನರನ್ನು ಪ್ರಭಾವಿಸಿದ್ದು, ಇಂದಿಗೂ ಸಹ ಇವರ ತತ್ವಗಳನ್ನು ಅಧ್ಯಯನ ಮಾಡುವವರು ಇದ್ದಾರೆ. ಅವರು ಹೇಳಿದಂತಹ ವಿಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವವರನ್ನು ಇಂದಿಗೂ ಸಹ ನಾವು ಕಾಣಬಹುದಾಗಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಪರಮಾತ್ಮನ ಆದರ್ಶವನ್ನು ಕಟ್ಟಿಕೊಂಡು ಬದುಕುವುದು ಹೇಗೆ ಎಂಬುದನ್ನು ಅತ್ಯಂತ ಪ್ರಯೋಗಿಕವಾಗಿ ತೋರಿಸಿಕೊಟ್ಟವರು ಶಂಕರಚಾರ್ಯರು. ಜಗತ್ತನ್ನು ಮಿತ್ಯ ಎಂದು ತಿಳಿದು ಪೂರ್ಣವಾಗಿ ಶಂಕರಚಾರ್ಯರು ನಿರ್ಲಕ್ಷ್ಯ ಮಾಡಿದಿದ್ದರೆ ಭಾರತದ ನಾಲ್ಕು ಮೂಲೆಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಕಟ್ಟುನಿಟ್ಟಾಗಿ ಹಾಗೂ ತಾತ್ವಿಕವಾಗಿ ಹುಟ್ಟಿದಂತಹ ಪರಿಶುದ್ಧವಾದ ವೈದಿಕ ಸಂಪ್ರದಾಯವನ್ನು ಮುನ್ನಡೆಸಲು ನಾಲ್ಕು ಪೀಠಗಳ ಸ್ಥಾಪನೆ ಆಗುತ್ತಿರಲಿಲ್ಲ ಎಂದು ತಿಳಿಸಿದರು. ಶಂಕರಚಾರ್ಯರು ತತ್ವಗಳಿಗೆ ಆದರ್ಶವಾಗಿದ್ದರೋ ಹಾಗೆಯೇ ಅವರು ಪ್ರಯೋಗಿಕವಾಗಿಯೂ ಸಹ ಇದ್ದರು. ಮನುಕುಲಕ್ಕೆ ಶಂಕರ ಚಾರ್ಯರ ಕೊಡುಗೆ ಅಪಾರವಾದದ್ದು, ತಾತ್ವಿಕ ದೃಷ್ಟಿಯಿಂದ ಧಾರ್ಮಿಕ ದೃಷ್ಟಿಯಿಂದ ಆಚರಣೆಯ ದೃಷ್ಟಿಯಿಂದ ಅವರು ಅದ್ವೈತ ಸಿದ್ದಾಂತದವನ್ನು, ವೇದಾಂತವನ್ನು ನಮ್ಮ ಜೀವನದಲ್ಲಿ ಯಾವ ರೀತಿ ಆದರ್ಶ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟವರು ಶಂಕರ್ಯಾಚಾರ್ಯರು ಎಂದು ಹೇಳಿದರು.
ಪ್ರೌಢಶಾಲಾ ಸಂಸ್ಕೃತ ಶಿಕ್ಷಕಿ, ಪಾರಂಗತ ಉಪನ್ಯಾಸಕಿಯಾದ ವಿದುಷಿ ಎಂ.ಸಿ ನಾಗಲಕ್ಷ್ಮಿ ಅವರು ಮಾತನಾಡಿ ಅದ್ವೈತ ಎಂಬ ಖಡ್ಗವನ್ನು ಹಿಡಿದು ಯಾವ ಮತಗಳನ್ನು ಬೇಡ ಎನ್ನದೆ ಅದ್ವೈತ ತತ್ವವನ್ನು ಪ್ರಕಟ ಮಾಡಲು ಪ್ರಾರಂಭ ಮಾಡಿದವರು ಶಂಕರಚಾರ್ಯರು ಎಂದು ಹೇಳಿದರು. ಶಂಕರಾಚಾರ್ಯರು ೩೨ ಮಾತ್ರ ಬದುಕಿದ್ದರು ಸಹ ಇವರ ಕೊಡುಗೆ ಅಪಾರವಾದದ್ದು, ಇವರು ಸಂತರಲ್ಲಿಯೇ ಅಗ್ರ ಗಣ್ಯರಾಗಿದ್ದರು, ಪ್ರಪಂಚದಲ್ಲಿಯೇ ಪ್ರಚಂಡ ಮಹಾನ್ ಜ್ಞಾನಿಯಾಗಿದ್ದರು, ತೀಕ್ಷ್ಣ ಬುದ್ದಿಯನ್ನು ಹೊಂದಿದ್ದರು ಎಂದು ತಿಳಿಸಿದರು.
ಅದ್ವೈತ ಎಂಬ ಸಿದ್ಧಾಂತವನ್ನು ಜಗತ್ತಿಗೆ ಎತ್ತಿ ಹಿಡಿದಂತಹ ಮಹಾನೀಯರು ಶಂಕರಚಾರ್ಯರು. ಇವರು ಬೋಧಿಸಿದಂತಹ ಅದ್ವೈತ ಸಿದ್ದಾಂತದಲ್ಲಿ ಬ್ರಹ್ಮ ಸತ್ಯ ಜಗತ್ತು ಮಿತ್ಯ. ಪ್ರಪಂಚ ಎಲ್ಲಾ ಸುಳ್ಳು. ಬ್ರಹ್ಮ ಎಂಬ ವಸ್ತು ನಮ್ಮೆಲ್ಲರಲ್ಲಿ ಚೈತನ್ಯವಾಗಿ ಏನಿದೆ ಅದೇ ಸತ್ಯ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಮೋಕ್ಷವನ್ನು ಪಡೆಯುವಂತಹ ಅಧಿಕಾರ ಎಲ್ಲರಿಗೂ ಇದೆ. ಹುಟ್ಟಿದ ಎಲ್ಲರಿಗೂ ಮೋಕ್ಷ ಪಡೆಯಬಹುದು ಎಂದು ಹೇಳಿದ್ದಾರೆ. ಜ್ಞಾನ, ಕರ್ಮ, ಭಕ್ತಿ ಎಂಬ ಮೂರು ಮಾರ್ಗಗಳನ್ನು ನಮಗೆ ನೀಡಿದ್ದಾರೆ ಅವೆಲ್ಲವೂ ಒಂದೇ ಆಗಿದ್ದರೂ ಸಹ ಬೇರೆ ಬೇರೆ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಸಮಾಜಕ್ಕೆ ಇವರ ಕೊಡುಗೆ ಅಪಾರವಾದದ್ದು, ಮನುಕುಲಕ್ಕೆ ಜ್ಞಾನವನ್ನು ನೀಡುವುದರ ಮೂಲಕ ಬೆಳಕನ್ನು ಚೆಲ್ಲಿದ ಜಗದ್ಗುರು, ವಿಶ್ವಗುರು ಶಂಕರ ಚಾರ್ಯರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್‌ನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ.ಸುದರ್ಶನ್, ಮುಖಂಡರಾದ ಡಾ. ಕೆ.ರಘುರಾಮ್ ವಾಜಪೇಯಿ, ಶ್ರೀಕಂಠ ಕುಮಾರ್, ನವೀನ್ ಕುಮಾರ್, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷರಾದ ಮೋಹನ್ ಕುಮಾರ್, ಮೈಸೂರಿನ ಚಳುವಳಿದಾರರದ ಅರವಿಂದ್ ಶರ್ಮಾ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.













