ಮನೆ ದೇವಸ್ಥಾನ ಹರಿಹರರ ಬೀಡು ಶಿವನಸಮುದ್ರ

ಹರಿಹರರ ಬೀಡು ಶಿವನಸಮುದ್ರ

0

ಜಲಲ.. ಜಲ ಧಾರೆ… ಕಾವೇರಿ ನದಿ ಧುಮ್ಮಿಕ್ಕುತ್ತಾ ಹರಿವ ವಿಹಂಗಮ ನೋಟವನ್ನು ಹಾಗೂ ಹಾಲುನೊರೆಯಂತೆ ಹಲವು ಕವಲುಗಳಲ್ಲಿ ಪ್ರಪಾತಕ್ಕೆ ರಭಸದಿಂದ ಭೋರ್ಗರೆಯುತ್ತಾ ಬೀಳುವ ಅವರ್ಣನಾತೀತ ಅನುಭವವನ್ನು ಕಣ್ತುಂಬಿಕೊಳ್ಳಬೇಕಾದರೆ ಶಿವನಸಮುದ್ರಕ್ಕೇ ಬರಬೇಕು.

ಶಿವನ ಸಮುದ್ರ ರಮಣೀಯ ಪ್ರಕೃತಿ ಸಿರಿಯ ಪ್ರವಾಸಿ ತಾಣವಷ್ಟೇ ಅಲ್ಲ ಪವಿತ್ರ ಪುಣ್ಯ ಕ್ಷೇತ್ರವೂ ಹೌದು. ಈಶ್ವರನ ಶಿರದಿಂದ ಗಂಗೆ ಧುಮ್ಮಿಕ್ಕುವಂತೆ ಕಾವೇರಿ ಇಲ್ಲಿ ಧುಮ್ಮಿಕ್ಕಿ ವಿಶಾಲ ಹರವು ಪಡೆದು ಸಮುದ್ರದೋಪಾದಿಯಲ್ಲಿ ಹರಿವ ಕಾರಣ ಇದಕ್ಕೆ ಶಿವನಸಮುದ್ರ ಎಂದೇ ಹೆಸರು ಬಂದಿದೆ.

ಇಲ್ಲಿ ಶ್ರೀ ರಂಗನಾಯಕಿ ಸಮೇತ ಶ್ರೀ ರಂಗನಾಥಸ್ವಾಮಿ,  ಶ್ರೀ ಪ್ರಸನ್ನ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ವೀರಭದ್ರರ ಪುರಾತನ ದೇವಾಲಯಗಳಿವೆ. ಈಗ ಹೊಸದಾಗಿ ಇಲ್ಲಿ ಮಾರಮ್ಮನ ದೇವಾಲಯ ಕೂಡ ನಿರ್ಮಿಸಲಾಗಿದೆ.

ಮಧ್ಯರಂಗ: ಕಾವೇರಿ ನದಿ ದಂಡೆಯ ಮೇಲಿರುವ ಮೂರು ರಂಗನಾಥಸ್ವಾಮಿ ದೇವಾಲಯಗಳ ಪೈಕಿ ಇದು ಎರಡನೆಯದಾಗಿದ್ದು, ಮಧ್ಯರಂಗ ಎಂದು ಖ್ಯಾತವಾಗಿದೆ. ಮೊದಲ ರಂಗನಾಥನ ಗುಡಿ ಶ್ರೀರಂಗಪಟ್ಟಣದಲ್ಲಿ ಇದನ್ನು ಆದಿರಂಗ ಎನ್ನುತ್ತಾರೆ, ಇನ್ನು ತಮಿಳುನಾಡಿನಲ್ಲಿರುವ ಶ್ರೀರಂಗ ಅಂತ್ಯರಂಗ ಎಂದು ಕರೆಸಿಕೊಂಡಿದೆ.

ಶಿವನಸಮುದ್ರದ ರಂಗನಾಥ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ. ಇಲ್ಲಿ ಮಲಗಿರುವ ಭಂಗಿಯಲ್ಲಿರುವ ಎರಡೂವರೆ ಮೀಟರ್ ಉದ್ದದ ಸುಂದರ ಹಾಗೂ ನಯನ ಮನೋಹರ ರಂಗನಾಥಸ್ವಾಮಿ ವಿಗ್ರಹವಿದೆ. ಈ ರಂಗನಾಥ ತನ್ನ ಚಲುವಿನಿಂದ  ಜಗನ್ಮೋಹನ ರಂಗನಾಥನೆಂದೂ ಖ್ಯಾತನಾಗಿದ್ದಾನೆ.

ವಿಗ್ರಹದ ಪಾದದ ಬಳಿ ಕಾವೇರಮ್ಮನ ಚಿಕ್ಕ ವಿಗ್ರಹವಿದೆ. ರಂಗಧಾಮನಿಗೆ ಹಾಸಿಗೆಯಾಗಿರುವ ಆದಿಶೇಷನನ ವಿಗ್ರಹವೂ ಇದೆ. ರಾಮಾನುಜಾಚಾರ್ಯರ ಮೂರ್ತಿಯೂ ಇದೆ.

ಈ ತಾಣದಲ್ಲಿರುವ ಮತ್ತೊಂದು ದೊಡ್ಡ ದೇವಾಲಯ ಸೋಮೇಶ್ವರನದು. ಇದು ಕೂಡ ಹೊಯ್ಸಳರ ಕಾಲದ್ದೇ. ಆರು ಮೂಲೆಗಳ ಆಕಾರದಲ್ಲಿರುವ ಪೀಠದ ಮೇಲಿರುವ ದೇವಾಲಯದಲ್ಲಿ  ಸೋಮೇಶ್ವರ, ಗಣೇಶ ಮತ್ತು ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಜಗತ್ತಿಗೆ ಹಗಲು ರಾತ್ರಿಯಲ್ಲಿ ಬೆಳಕು ನೀಡುತ್ತಾ ಜಗದ ಕಣ್ಣಾಗಿರುವ ಸೂರ್ಯಚಂದ್ರರ ಮೂರ್ತಿಗಳೂ ಇವೆ.

ದೇವಾಲಯದ ಕಂಬಗಳು ಸೂಕ್ಷ್ಮ ಕೆತ್ತನೆಗಳಿಂದ ಹಾಗೂ ಆಲಂಕಾರಿಕ ಕೆತ್ತನೆಗಳಿಂದ ಮನಮೋಹಕವಾಗಿವೆ. ಸಮೀಪದಲ್ಲಿಯೇ ಚೋಳ ಶೈಲಿಯ ಮೀನಾಕ್ಷಿದೇವಿ ದೇವಾಲಯವಿದೆ. ವೀರಭದ್ರ ದೇವರ ಗುಡಿ ಇದೆ.

ಶಿವನಸಮುದ್ರ ಜಲಪಾತ : ಇಲ್ಲಿ ಕರುನಾಡ ಜೀವನದಿ ಕಾವೇರಿ ತಲಕಾವೇರಿ ತಿರುವು ಪಡೆದು ‘ಗಗನಚುಕ್ಕಿ’ ಹಾಗೂ ‘ಭರಚುಕ್ಕಿ’ ಜಲಪಾತಗಳನ್ನು ಸೃಷ್ಟಿಸುತ್ತದೆ. ಈ ಜಲಧಾರೆ ಸಮುದ್ರದಂತೆ ಸವಿಸ್ತಾರವಾಗಿ ತಮಿಳುನಾಡಿನತ್ತ ತನ್ನ ಪಯಣ ಮುಂದುವರಿಸುತ್ತದೆ. ಮಳೆಗಾಲದಲ್ಲಿ ಹಾಲುನೊರೆಯಂತೆ ಉಕ್ಕಿ ಹರಿವ ಶಿವನಸಮುದ್ರದ ಜಲಪಾತಗಳನ್ನು ವೀಕ್ಷಣಾಗೋಪುರದಲ್ಲಿ ನಿಂತು ನೋಡುವುದೇ ಒಂದು ಸೊಬಗು.

ಶತಮಾನ ಸಂಭ್ರಮ: ಶಿವನಸಮುದ್ರ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲ, ಇಡೀ ದೇಶವನ್ನೇ ಕತ್ತಲಿಂದ ಬೆಳಕಿಗೆ ತಂದ ಸ್ಮರಣೀಯ ತಾಣ. ಕತ್ತಲಲ್ಲಿದ್ದ ಕರುನಾಡಿಗೆ ಬೆಳಕು ನೀಡಿದ ಕೀರ್ತಿಯೂ ಶಿವನಸಮುದ್ರದ್ದು.

ತನ್ನದೇ ಆದ ಸಮರ್ಥ ಶಕ್ತಿಯಿಂದ ಇಲ್ಲಿ ಕಾವೇರಿ 419ಅಡಿ ಕಂದಕಕ್ಕೆ ಧುಮ್ಮಿಕ್ಕುತ್ತಾಳೆ. ತಾಯಿ ಕಾವೇರಿಯ ಈ ಭೋರ್ಗರೆತ ಕಂಡ ಮೈಸೂರು ರಾಜ್ಯದ ಅಂದಿನ ಉಪಮುಖ್ಯ ಎಂಜಿನಿಯರ್ ಮೇಜರ್ ಎ.ಜೆ.ಡಿ. ಲಾಬಿನೀರ್ 1896-99ರ ಅವಧಿಯಲ್ಲಿ ಇಲ್ಲಿ ಜಲವಿದ್ಯುತ್ ಉತ್ಪಾದನೆಗಾಗಿ ಯೋಜನೆ ರೂಪಿಸಿದರು.

ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್. ಕೆ. ಶೇಷಾದ್ರಿ ಅಯ್ಯರ್ ಅವರು ಲಾಬಿನೀರ್ ಅವರ ಈ ಯೋಜನೆಗೆ ಪ್ರೋತ್ಸಾಹ ನೀಡಿದರು. ಇದರ ಫಲವಾಗಿಯೇ ೧೯೦೨ರ ಜೂನ್ ೩೦ರಂದು ಏಷ್ಯಾದ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಇಲ್ಲಿ ಕಾರ್ಯಾರಂಭ ಮಾಡಿತು. ವಿಶ್ವದಲ್ಲೇ ಪ್ರಥಮ ಬೃಹದಾಕಾರದ 70೦ ಕಿ.ವ್ಯಾ.ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಅಂದಿನ ಮೈಸೂರಿನ ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬರ್ಟ್‌’ಸನ್ ಚಾಲನೆಕೊಟ್ಟರು, ಅವರ ಪತ್ನಿ ಮಿಸೆಸ್ ರಾಬರ್ಟ್‌’ಸನ್ ಕೋಲಾರ ಚಿನ್ನದ ಗಣಿಗೆ 148 ಕಿ.ಮೀ. ಮಾರ್ಗದಲ್ಲಿ ವಿದ್ಯುತ್ ಹರಿಸುವ ಯೋಜನೆಗೆ ಚಾಲನೆ ಕೊಟ್ಟರು. ಭಾರತ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಇದು. ಶೇಷಾದ್ರಿ ಅಯ್ಯರ್ ಅವರ ಪರಿಶ್ರಮದ ಫಲವಾಗಿ ರೂಪು ತಲೆದ ಈ ಜಲವಿದ್ಯುತ್ ಘಟಕಕ್ಕೆ ಮಹಾರಾಜರು ಅವರ ಹೆಸರನ್ನೇ ಇಟ್ಟರಾದರೂ, ಶಿವನಸಮುದ್ರದ ಈ ಕೇಂದ್ರ ಶಿವ ವಿದ್ಯುದಾಗಾರ ಎಂದೇ ಕರೆಸಿಕೊಂಡಿದೆ.

ಕೋಲಾರ ಚಿನ್ನದ ಗಣಿಗೆ 35 ಕಿ.ವ್ಯಾ. ವಿದ್ಯುತ್ ಒದಗಿಸಿ ಗಂಧದ ನಾಡನ್ನು ಚಿನ್ನದ ಬೀಡಾಗಿ ಮಾಡಿದ ಹೆಮ್ಮೆಯೂ ಈ ತಾಣದ್ದು. ಈಗ ಈ ವಿದ್ಯುತ್‌ದಾಗಾರ ಹೊಸ ಉಪಕರಣಗಳಿಂದ ಆಧುನೀಕರಣಗೊಂಡಿದ್ದು, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು (1೦ ಘಟಕ ಸೇರಿ) ವಾರ್ಷಿಕ 180 ದಶಲಕ್ಷ ಯುನಿಟ್‌ಗಳಿಗೆ ಏರಿಸಿಕೊಂಡಿದೆ.

ಗಗನಚುಕ್ಕಿ, ಭರಚುಕ್ಕಿ, ಶಿವನಸಮುದ್ರಪ್ರಸ್ತುತ ಶತಮಾನದ ಸಂಭ್ರಮದಲ್ಲಿರುವ ಇಲ್ಲಿ ಪ್ರವಾಸಿಗರಿಗೆ ಭಾರತದ ಪ್ರಥಮ ವಿದ್ಯುತ್ ಕೇಂದ್ರದ ಇತಿಹಾಸ ಪರಿಚಯಿಸಲು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಶಿವನಸಮುದ್ರ ಮಾದರಿಯನ್ನೊಳಗೊಂಡ ಮ್ಯೂಸಿಯಂ ರಚಿಸಲಾಗಿದೆ. ಇದರಲ್ಲಿ ಆರಂಭದ ದಿನಗಳಲ್ಲಿ ಬಳಸಲಾದ ಯಂತ್ರೋಪಕರಣಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಈ ತಾಣವನ್ನು ರಾಷ್ಟ್ರೀಯ ಪಾರಂಪರಿಕ ಕೇಂದ್ರ ಎಂದು ಸಾರಿದೆ. 2006ರಲ್ಲಿ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಈ ಘೋಷಣೆ ಮಾಡಿದರು.

ಪ್ರವಾಸ ಮಾಹಿತಿ: ಈ ಸುಂದರ ಜಲಪಾತ ಬೆಂಗಳೂರಿನಿಂದ 120 ಕಿಲೋ ಮೀಟರ್ ದೂರದಲ್ಲಿದೆ. ಮಂಡ್ಯದಿಂದ ಇಲ್ಲಿಗೆ ಕೇವಲ 60 ಕೀಲೋ ಮೀಟರ್ ಮಾತ್ರ. ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌’ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in ಸಂಪರ್ಕಿಸಬಹುದು