ಬಳ್ಳಾರಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಶಾಹಿರ್ ಶೇಖ್ ನನ್ನು ನಾಗ್ಪುರ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈತ ನನ್ನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವ ಮಾಹಿತಿ ಕೇಳಿ ನನಗೆ ಆಘಾತವಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಹಿರ್ ಶೇಖ್ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನನಗೆ ಫೋನ್ ಮಾಡಿ ತಿಳಿಸಿದರು. ಈ ಬಗ್ಗೆ ಈಗಾಗಲೇ ಉನ್ನತ ಪೊಲೀಸರೊಂದಿಗೆ ಮಾತನಾಡಿ ಚರ್ಚಿಸಲಾಗಿದೆ ಎಂದರು.
ನನ್ನ ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಕಾರಣ ಏನೆಂದು ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾವು ಹೆದರುವವರಲ್ಲ. ಯಾವುದೇ ಬೆದರಿಕೆಗೆ ಹೆದರಿ ನನ್ನ ವಿಚಾರ, ಸಿದ್ಧಾಂತಗಳಿಂದ ಹಿಂದೆ ಸರಿಯುವುದಿಲ್ಲ. ಈ ಹಿಂದೆ ಹಿಂದುತ್ವ ಪ್ರತಿಪಾದಿಸಿ ಮಾತಾಡಿದಾಗ ಸಹ ನನಗೆ ಕೊಲೆ ಬೆದರಿಕೆ ಬಂದಿತ್ತು ಎಂದು ತಿಳಿಸಿದರು.
ಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಕರೆ ಮಾಡಿ ಮಾತನಾಡಿ ಸೂಚನೆ ನೀಡಿದಂತೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವೆ. ಯಾರಿಗೆ ಟಿಕೆಟ್ ಸಿಗಲಿ, ಬಿಡಲಿ ನಾನು ಟಿಕೆಟ್ ಕೊಡಿ ಎಂದು ಕೇಳಲ್ಲ. ನಾನು ಯಾವ ಡಿಮ್ಯಾಂಡ್ ಸಹ ಇಟ್ಟಿಲ್ಲ. ಪಕ್ಷದ ಸೂಚನೆ ಮೇರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದರು.
ಟಿಕೆಟ್ ವಂಚಿತರಾದವರನ್ನು ಮನವೊಲಿಸುವ ಕಾರ್ಯ ಮಾಡಲಾಗುತ್ತಿದೆ. ಅದಕ್ಕೂ ಮೀರಿ ಟಿಕೆಟ್ ಸಿಕ್ಕಿಲ್ಲ ಎಂದು ರಾಜೀನಾಮೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವವರು ಪಕ್ಷಕ್ಕೆ ನಿಷ್ಠರಲ್ಲ ಎಂದರ್ಥ. ಹೋಗುವವರು ಹೋಗಲಿ. ಅದು ಅವರ ವೈಯಕ್ತಿಕ ತೀರ್ಮಾನ ಎಂದು ಹೇಳಿದರು.