ಅಫ್ತಾಬ್ ಪೂನಾವಾಲಾ ಆರೋಪಿಯಾಗಿರುವ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿನ ಆರೋಪಪಟ್ಟಿಯ ವಿವರಗಳನ್ನು ಪ್ರಸಾರ ಮಾಡದಂತೆ ಅಥವಾ ಪ್ರಕಟಿಸದಂತೆ ಸುದ್ದಿವಾಹಿನಿಗಳು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಬುಧವಾರ ನಿರ್ಬಂಧ ವಿಧಿಸಿದೆ.
ತನ್ನ ಆದೇಶ ಮಂಪರು ಪರೀಕ್ಷೆ ಮತ್ತು ಸಿಸಿಟಿವಿ ದೃಶ್ಯಗಳ ಆಡಿಯೋಗೂ ಸಂಬಂಧಿಸಿದ್ದು ಅವುಗಳನ್ನು ಮಾಧ್ಯಮಗಳು ಪ್ರಸಾರ ಮಾಡುವಂತಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.
ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಜನೀಶ್ ಭಟ್ನಾಗರ್ ಈ ಆದೇಶ ನೀಡಿದ್ದಾರೆ.
ಆರೋಪಪಟ್ಟಿಯ ಪ್ರತಿಗಳನ್ನು ಪಡೆದಿರುವ ಯಾವುದೇ ಮಾಧ್ಯಮ ವಾಹಿನಿಗಳು ಅಥವಾ ಸಂಸ್ಥೆ ಅವುಗಳನ್ನು ತನ್ನ ಸುದ್ದಿ ವಾಹಿನಿಯಲ್ಲಿ ಪ್ರದರ್ಶಿಸಬಾರದು. ಸುದ್ದಿ ವಾಹಿನಿಗಳು ಹಾಗೆ ಮಾಡದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಆರೋಪಪಟ್ಟಿಯ ವಿಚಾರಗಳನ್ನು ವರದಿ ಮಾಡುವ ಮಾಧ್ಯಮ ಸಂಸ್ಥೆ ಮತ್ತು ಟಿವಿ ವಾಹಿನಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೋರಿ ದೆಹಲಿ ಪೊಲೀಸರು ಮೊದಲು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್’ಗೆ ಅರ್ಜಿ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯ ಸೂಚಿಸಿತ್ತು.
ಬಂಬಲ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಭೇಟಿಯಾದ ಅಫ್ತಾಬ್- ಶ್ರದ್ಧಾ ಜೋಡಿ ಸಹಜೀವನ ನಡೆಸಿದ್ದರು. ಮೂಲತಃ ಮುಂಬೈ ನಿವಾಸಿಗಳಾಗಿದ್ದ ಈ ಜೋಡಿ ಕಳೆದ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಪೊಲೀಸರ ಪ್ರಕಾರ, ಕಳೆದ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್’ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿ ಇರಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ ಆರೋಪ ಆತನ ಮೇಲಿದೆ.
ಕಳೆದ ವರ್ಷ ನವೆಂಬರ್’ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿಸಿತ್ತು.