ಮನೆ ಮನರಂಜನೆ ʻಹಿಂದಿ ರಾಷ್ಟ್ರ ಭಾಷೆʼ ಎಂದ ಬಾಲಿವುಡ್‌ ನಟ ಅಜಯ್‌ ದೇವಗನ್‌ ಗೆ ಸಿದ್ದು, ಹೆಚ್ಡಿಕೆ ಸೇರಿದಂತೆ...

ʻಹಿಂದಿ ರಾಷ್ಟ್ರ ಭಾಷೆʼ ಎಂದ ಬಾಲಿವುಡ್‌ ನಟ ಅಜಯ್‌ ದೇವಗನ್‌ ಗೆ ಸಿದ್ದು, ಹೆಚ್ಡಿಕೆ ಸೇರಿದಂತೆ ಹಲವರಿಂದ ತಿರುಗೇಟು

0

ಬೆಂಗಳೂರು (Bengaluru)- ‘ಹಿಂದಿ ರಾಷ್ಟ್ರ ಭಾಷೆಯಲ್ಲ‘ (hindi is not a national language) ಎಂಬ ಕನ್ನಡ ಚಿತ್ರನಟ ಸುದೀಪ್‌ ಹೇಳಿಕೆಯನ್ನು ಬೆಂಬಲಿಸಿರುವ ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಕನ್ನಡಿಗರು ʻಹಿಂದಿ ರಾಷ್ಟ್ರ ಭಾಷೆʼ ಎಂದಿರುವ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರನ್ನು ತರಾಟೆಗೆ ತೆಗೆದುಕೊಂಡು ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah), ಹೆಚ್.ಡಿ.ಕುಮಾರಸ್ವಾಮಿ (H.D.Kumarswamy), ನಟರಾದ ಸತೀಶ್‌ ನಿನಾಸಂ (Satish Ninasam), ಶ್ರೀನಗರ ಕಿಟ್ಟಿ (Srinagara Kitti), ನಟಿ ರಮ್ಯಾ(Ramya), ನಿರ್ದೇಶಕ ಮನ್ಸೂರೆ (Mansore) ಹಾಗೂ ಕನ್ನಡಪರ ಹೋರಾಟಗಾರರು, ಕನ್ನಡಿಗರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ಟ್ವಿಟ್ವರ್‌ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಜಯ್‌ ದೇವಗನ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಹಿಂದಿ ಹಿಂದೆಯೂ ನಮ್ಮ ರಾಷ್ಟ್ರ ಭಾಷೆ ಆಗಿರಲಿಲ್ಲ. ಮುಂದೆಯೂ ಆಗುವುದಿಲ್ಲ ನಮ್ಮ ರಾಷ್ಟ್ರ ಭಾಷೆ ಆಗುವುದೂ ಇಲ್ಲ. ನಮ್ಮ ರಾಷ್ಟ್ರದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಭವ್ಯ ಇತಿಹಾಸವಿದ್ದು, ಆ ಭಾಷೆಯ ಜನರಿಗೆ ಹೆಮ್ಮೆ ತರುವಂತಿದೆ. ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಹೇಳಿದ್ದಾರೆ.

ಹೆಚ್‌ಡಿಕೆ ಅವರು ಸರಣಿ ಟ್ವೀಟ್‌ ಮಾಡಿದ್ದು, ‘ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕರಸಂಗತನ ಮೆರೆದಿದ್ದಾರೆ’ ಎಂದು ಹೇಳಿದ್ದಾರೆ.

ದೇಶದ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ. ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ ಎಂದಿದ್ದಾರೆ.

ಮೊದಲಿನಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿದ ‘ಹಿಂದಿ ರಾಜಕೀಯ ಪಕ್ಷಗಳು’ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕುವ ದುಷ್ಟ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ಆರಂಭ ಮಾಡಿದ ಅನ್ಯಭಾಷೆಗಳನ್ನು ಹತ್ತಿಕ್ಕುವ ಕೃತ್ಯಗಳನ್ನು ಈಗ ಬಿಜೆಪಿ ಅತಿಯಾಗಿ ಮುಂದುವರಿಸುತ್ತಿದೆ. ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿಯ ರೀತಿಯಲ್ಲಿ ದೇವಗನ್ ಬಡಬಡಿಸಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ ‘ಫೂಲ್ ಔರ್ ಕಾಂಟೆ’ ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು. ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ. ಬಿಜೆಪಿ ಬಿತ್ತಿದ ಈ ರೋಗ, ಅಂಟು ಜಾಢ್ಯದಂತೆ ಹರಡುತ್ತಾ ದೇಶವನ್ನು ಛಿದ್ರಗೊಳಿಸುವಂತಿದೆ. ಭಾರತದ ಏಕತೆಗೆ ಇದು ಅಪಾಯಕಾರಿ ಎಂದು ಹೇಳಿದ್ದಾರೆ.

ನಟ ನೀನಾಸಂ ಸತೀಶ್‌, ಹಿಂದಿ ಭಾಷೆಯ ನೆಲದಲ್ಲಿ ಕನ್ನಡ ಸಿನಿಮಾಗಳ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. ‘ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ’ ಎಂದು ಹಂಚಿಕೊಳ್ಳುವ ಜೊತೆಗೆ ಕಿಚ್ಚ ಸುದೀಪ್‌ ಅವರನ್ನು ಟ್ಯಾಗ್‌ ಮಾಡಿ, ನಿಮ್ಮ ಧ್ವನಿಗೆ ನಮ್ಮ ಧ್ವನಿ ಎಂದಿದ್ದಾರೆ.

” ಹಿಂದಿ ಯಾವಾಗಲೂ ನಮ್ಮ ರಾಷ್ಟ್ರೀಯ ಭಾಷೆ ಆಗಿರಲಿಲ್ಲ. ಅದೇ ಟ್ವೀಟ್” ಎಂದು ಕನ್ನಡದ ನಟ ಶ್ರೀನಗರ ಕಿಟ್ಟಿ ಖಡಕ್ ಆಗಿ ಟ್ವೀಟ್ ಮಾಡಿದ್ದು, ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.

‘ಇಲ್ಲ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಅಜಯ್ ದೇವಗನ್ ಅವರೇ, ನಿಮ್ಮ ಅಜ್ಞಾನವು ದಿಗ್ಭ್ರಮೆಗೊಳಿಸುವಂತಿದೆ. ಮತ್ತು ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಸಿನಿಮಾಗಳು ಹಿಂದಿ ಭಾಷಿಕ ನೆಲದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದು ಒಳ್ಳೆಯ ವಿಷಯ. ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ದಯವಿಟ್ಟು ನಿಮ್ಮ ಸಿನಿಮಾಗಳನ್ನು ನಾವು ಆನಂದಿಸುವಷ್ಟೇ ನಮ್ಮ ಸಿನಿಮಾಗಳನ್ನು ನೋಡಿ ಆನಂದಿಸಿ’ ಎಂದು ರಮ್ಯಾ ಟ್ವೀಟ್‌ ಮಾಡಿದ್ದಾರೆ.

 “ಅಜಯ್ ದೇವಗನ್ ಅವರೇ ದಯವಿಟ್ಟು ಒಮ್ಮೆ ಗುಜರಾತ್ ಹೈಕೋರ್ಟಿನ ತೀರ್ಪನ್ನು ಓದಿ.” ಎಂದು ನಿರ್ದೇಶಕ ಮನ್ಸೂರೆ ಟ್ವೀಟ್ ಮಾಡಿದ್ದಾರೆ. ಗುಜರಾತ್ ಹೈ ಕೋರ್ಟ್ ರಾಷ್ಟ್ರೀಯ ಭಾಷೆ ಹಿಂದಿ ಅಲ್ಲ ಎಂಬ ಬಗ್ಗೆ ನೀಡಿದ ತೀರ್ಪಿನ ಲಿಂಕ್ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಹೋರಾಟಗಾರರು ಅಜಯ್‌ ದೇವಗನ್‌ ಹೇಳಿಕೆಗೆ ಕಿಡಿಕಾರಿದ್ದು, ‘ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ’ ಎಂದು ಪ್ರಕಟಿಸಿದ್ದಾರೆ.

ಅಜಯ್‌ ದೇವಗನ್‌ ರೀತಿಯ ದೊಡ್ಡ ಸ್ಟಾರ್‌ಗಳಿಗೇ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದು ತಿಳಿದಿಲ್ಲವಾದರೆ, ಎಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಹಬ್ಬಿಸಲಾಗಿದೆ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.

ನಟ ಕಿಚ್ಚ ಸುದೀಪ್‌ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್‌ ಇಂಡಿಯಾ ಚಿತ್ರಗಳ ಕುರಿತು ಮಾತನಾಡುತ್ತ, ‘ಹಿಂದಿಯಿಂದ ಪ್ಯಾನ್‌ ಇಂಡಿಯಾ ಸಿನಿಮಾಗಳು ಬರುತ್ತಿವೆ. ಅವರು ತೆಲುಗು, ತಮಿಳು ಭಾಷೆ ಡಬ್‌ ಮಾಡಿ ಒದ್ದಾಡುತ್ತಿದ್ದಾರೆ. ಈಗ ಹಿಂದಿ ರಾಷ್ಟ್ರಭಾಷೆ ಅಲ್ಲ,…’ ಎಂದು ಹೇಳಿದ್ದರು. ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, ‘ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ’ ಎಂದಿದ್ದರು.

ಇದಕ್ಕೆ ಸುದೀಪ್‌ ಸಹ ಟ್ವೀಟ್‌ ಮಾಡಿ, “ಹಲೋ ಅಜಯ್ ದೇವಗನ್ ಸರ್, ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ಆದರೆ, ಅದು ನಿಮಗೆ ಬೇರೆಯದ್ದೇ ರೀತಿಯಲ್ಲಿ ತಲುಪಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿದಾಗ ಆ ಹೇಳಿಕೆಯ ಬಗ್ಗೆ ವಿವರಿಸುವೆ. ನೋಯಿಸುವ ಉದ್ದೇಶದಿಂದಾಗಲಿ, ಪ್ರಚೋದಿಸಲು ಮತ್ತು ಚರ್ಚೆಯನ್ನು ಹುಟ್ಟು ಹಾಕಲು ನಾನು ಆ ಹೇಳಿಕೆಯನ್ನು ನೀಡಿಲ್ಲ. ನಾನು ಹಾಗೆ ಯಾಕೆ ಮಾಡಲಿ? ಎಂದು ಸರಣಿ ಟ್ವೀಟ್‌ ಮಾಡಿದ್ದರು.

ಜೊತೆಗೆ ಸ್ಪಷ್ಟನೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಜಯ್‌ ದೇವಗನ್‌, ನಿಮ್ಮ ಮಾತುಗಳು ನನಗೆ ಅನುವಾದ ಆದ ಸಂದರ್ಭದಲ್ಲಿ ತಪ್ಪಾಗಿರಬಹುದು. ತಪ್ಪು ತಿಳಿವಳಿಕೆಯನ್ನು ಸ್ಪಷ್ಟಪಡಿಸಿರುವುದಕ್ಕೆ ಧನ್ಯವಾದ ತಿಳಿಸಿ ವಿವಾದಕ್ಕೆ ತೆರೆ ಎಳೆದಿದ್ದರು.  

ಆ ಟ್ವೀಟ್‌ಗೂ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ಸಂಪೂರ್ಣ ವಿಷಯವನ್ನು ತಿಳಿಯದೇ, ಪ್ರತಿಕ್ರಿಯೆ ನೀಡದೆ ಇರುವುದೂ ಮುಖ್ಯವಾಗುತ್ತದೆ. ನಿಮ್ಮನ್ನು ದೂಷಿಸುವುದಿಲ್ಲ. ಕ್ರಿಯಾಶೀಲ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಟ್ವೀಟ್‌ ಬಂದಿದ್ದರೆ, ನನಗೆ ಸಂತಸವಾಗುತ್ತಿತ್ತು ಎಂದಿದ್ದಾರೆ.