ಮೈಸೂರು(Mysuru): ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ , ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಅವರೊಬ್ಬ ಮೀರ್‌ಸಾದಿಕ್ ರಾಜಕಾರಣಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದ ಘಟಾನುಘಟಿ ದಲಿತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದರು. ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸದೆ ಮೋಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಸಂಬಂಧ ಆಯೋಗವನ್ನು ಯಾರಾದರೂ ರಚಿಸಿರಬಹುದು. ಆದರೆ, ಅನುಷ್ಠಾನಕ್ಕೆ ತಂದಿರುವುದು ನಮ್ಮ ಸರ್ಕಾರ. ಇದೊಂದು ಐತಿಹಾಸಿಕ ದಾಖಲೆ. ಈ ಶ್ರೀರಾಮುಲು ಸಮಾಜಕ್ಕೆ ನೀಡಿದ್ದ ಭರವಸೆ ಉಳಿಸಿಕೊಂಡಿದ್ದಾನೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಹೀಗಾಗಿ ಮಾಡಲಿಲ್ಲ. ನಮಗೆ ರಾಜಕೀಯ ಇಚ್ಛಾಶಕ್ತಿ ಇರುವುದರಿಂದ ಮೀಸಲಾತಿ ಹೆಚ್ಚಿಸಿದ್ದೇವೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಪರಿಶಿಷ್ಟರಿಗೆ ಸೌಲಭ್ಯ ದೊರೆತಿದೆ ಎಂದರು.
ಕುರುಬರು ಸೇರಿದಂತೆ ಯಾವುದೇ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಕೆಲವು ನಿಯಮಗಳಿವೆ. ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು. ಇದಕ್ಕಾಗಿ ಸಮಿತಿ ರಚನೆಯಾಗಬೇಕು. ಕೇಂದ್ರ ಸರ್ಕಾರವು ಸಮ್ಮತಿಸಬೇಕು… ಹೀಗೆಲ್ಲಾ ಪ್ರಕ್ರಿಯೆಗಳಿವೆ ಎಂದು ಪ್ರತಿಕ್ರಿಯಿಸಿದರು.
ಸರ್ಕಾರಿ ಸಾರಿಗೆ ಬಸ್ ಪ್ರಯಾಣದರ ಹೆಚ್ಚಿಸುವ ಪ್ರಸ್ತಾಪವಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳ ನಿಯೋಜನೆ ಮಾಡಲು ಆದ್ಯತೆ ನೀಡಲಾಗಿದೆ. ಕ್ರಮೇಣ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.