ಬೆಂಗಳೂರು: ಯುಪಿಎಸ್ಸಿಯ ಮಾದರಿಯಲ್ಲಿ ಲಿಖಿತ ಪರೀಕ್ಷೆಯ ಒಟ್ಟು ಅಂಕಗಳ ಶೇ.12.5 ರಷ್ಟನ್ನು ನಿಗಧಿಪಡಿಸಿ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಹಾಗೂ ಈಗ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೆ.ಪಿ.ಎಸ್.ಸಿ.ಯಿಂದ ನಡೆಯುವ ವ್ಯಕ್ತಿತ್ವ ಪರೀಕ್ಷೆಗೆ ನಿಗಧಿಪಡಿಸಿರುವ ಅಂಕಗಳನ್ನು ಕಡಿತಗೊಳಿಸುವ ಕುರಿತು ಸರ್ಕಾರ ಸಂವಿಧಾನ ಬಾಹಿರವಾದ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಆರೋಪಿಸಿರುವ ಅವರು, ಅಂಕ ಕಡಿತ ಕುರಿತಂತೆ ಹಲವರು ಸರ್ಕಾರಕ್ಕೆ ಪತ್ರ ಬರೆದು ಆಕ್ಷೇಪವನ್ನು ವ್ಯಕ್ತಪಡಿಸಿರುತ್ತಾರೆ. ಆದರೂ ಸಹ ಸರ್ಕಾರ ತನ್ನ ನಿರ್ಧಾರಗಳನ್ನು ಇನ್ನೂ ಸಹ ಬದಲಿಸಿಲ್ಲ.
ಲೋಕಸೇವಾ ಆಯೋಗವು ಆಯ್ಕೆ ಮಾಡುವÀ ‘ಎ’ ಮತ್ತು ‘ಬಿ’ ಶ್ರೇಣಿಯ ಅಧಿಕಾರಿಗಳಿಗೆ ವ್ಯಕ್ತಿತ್ವ ಪರೀಕ್ಷೆ ಮಾಡುವಾಗ ಅಂಕಗಳನ್ನು ಲಿಖಿತ ಪರೀಕ್ಷೆ ಅಂಕಗಳ ಶೇ.2 ರಷ್ಟಕ್ಕೆ ಇಳಿಸಿದೆ. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು ಕರ್ನಾಟಕದ ಪಾಲಿಗೆ ಅತ್ಯಂತ ಅನಾಹುತಕಾರಿಯಾಗಿದೆ. ದೇಶದ ಹಲವು ರಾಜ್ಯಗಳು 100 ರಿಂದ 275 ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗಾಗಿ ನಿಗಧಿಪಡಿಸಿಕೊಂಡಿವೆ.
ಜಗತ್ತಿನಲ್ಲಿ ಗುಣ ಮಟ್ಟದ ಆಯ್ಕೆಯ ವಿಚಾರದಲ್ಲಿ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಕೇಂದ್ರ ಲೋಕ ಸೇವಾ ಆಯೋಗವು 1750 ಅಂಕಗಳಿಗೆ ಲಿಖಿತ ಪರೀಕ್ಷೆಗೆ ಹಾಗೂ 275 ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಳವಡಿಸಿಕೊಂಡಿದೆ. ವ್ಯಕ್ತಿತ್ವ ಪರೀಕ್ಷೆಗಳಿಗಾಗಿ ಹಲವು ರಾಜ್ಯಗಳು ಭಿನ್ನ ಭಿನ್ನ ಮಾದರಿಗಳನ್ನು ಅಳವಡಿಸಿಕೊಂಡಿವೆ. ಉದಾಹರಣೆಗೆ ಅಸ್ಸಾಂನಲ್ಲಿ-275, ಪಶ್ಚಿಮ ಬಂಗಾಳ-200, ಬಿಹಾರ-120, ಉತ್ತರ ಕಾಂಡ-200, ಉತ್ತರ ಪ್ರದೇಶ-100, ಗುಜರಾತ್-100, ಮಹಾರಾಷ್ಟ್ರ-100, ಮಧ್ಯಪ್ರದೇಶ-175, ಪಂಜಾಬ್-150 ಮತ್ತು ತಮಿಳುನಾಡು ರಾಜ್ಯವು 100 ಅಂಕಗಳನ್ನು ನಿಗಧಿಪಡಿಸಿಕೊಂಡಿದೆ. ಯು.ಪಿ.ಎಸ್.ಸಿ.ಯಲ್ಲಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ ನಡುವಿನ ಅನುಪಾತ ಶೇ.15.71 ರಷ್ಟಿದೆ. ನಮ್ಮ ರಾಜ್ಯದಲ್ಲಿ 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು. ಆನಂತರ ದಿ:04-06-2020 ರಲ್ಲಿ 200 ಅಂಕಗಳ ಬದಲಿಗೆ 50 ಅಂಕಗಳಿಗೆ ಕಡಿತಗೊಳಿಸಲಾಯಿತು.
2020 ಕ್ಕಿಂತ ಮೊದಲು 1750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು. ಈಗ 18-02-2022 ರಂದು ಕೆಪಿಎಸ್ಸಿಯ ಜೊತೆ ಸಮಾಲೋಚಿಸದೆ ಏಕಾಏಕಿಯಾಗಿ ಸರ್ವಾಧಿಕಾರಿ ಪ್ರವೃತ್ತಿಯಿಂದ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 25 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳ ಅಂಕಗಳ ನಡುವಿನ ಅನುಪಾತ ಶೇ.2 ಕ್ಕೆ ಇಳಿಸಿದಂತಾಗಿದೆ.
ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಲೋಪ ದೋಷಗಳಿಲ್ಲವೆಂದಲ್ಲ, ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನಗಳಿಗೆ ನಿಗಧಿಪಡಿಸಿದ ಅಂಕಗಳಿಗೆ ಸಂಬಂಧಪಟ್ಟಂತೆ ಹಲವಾರು ಆರೋಪಗಳು ಇವೆ. ಹಾಗಾಗಿಯೇ ನಮ್ಮ ಸರ್ಕಾರದ ಅವಧಿಯಲ್ಲಿ ಪಿ.ಸಿ.ಹೋಟಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಪಾರದರ್ಶಕತೆಯನ್ನು ತರಲು ಪ್ರಯತ್ನಿಸಿದ್ದೆವು. ಪಿ.ಸಿ.ಹೋಟಾ ಸಮಿತಿಯ ಹಲವು ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿದ ನಂತರ ಭ್ರಷ್ಟಾಚಾರದ ಆರೋಪಗಳು ಬಹುತೇಕ ಕಡಿಮೆಯಾಗಿವೆ. ಹಾಗಾಗಿ ಯುಪಿಎಸ್ಸಿ ಯ ಮಾದರಿಯಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಸಂದರ್ಶನಗಳನ್ನು ನಡೆಸಬೇಕಾಗಿದೆಯೇ ಹೊರತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನೆ ಕಡಿಮೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಕಾರ್ಯಾಂಗಕ್ಕೆ ಮಾನವೀಯ ಮತ್ತು ಸಮರ್ಥ ಅಧಿಕಾರಿಗಳು ಇಲ್ಲದೇ ಹೋಗುತ್ತದೆ. ಇದರ ದುಷ್ಪರಿಣಾಮ ರಾಜ್ಯದ ಮುಂದಿನ ಭವಿಷ್ಯದ ಮೇಲೆ ಆಗುತ್ತದೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ತಿಳಿಸಿದ್ದಾರೆ