ಮನೆ ರಾಜಕೀಯ ತಾಲ್ಲೂಕು ಕೋರ್ಟ್ ನಲ್ಲಿಅಭ್ಯಾಸ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ  ಆರ್ಥಿಕ ವ್ಯವಸ್ಥೆ ಅರ್ಥವಾಗುತ್ತದೆಯೇ ? : ಪ್ರತಾಪ್...

ತಾಲ್ಲೂಕು ಕೋರ್ಟ್ ನಲ್ಲಿಅಭ್ಯಾಸ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ  ಆರ್ಥಿಕ ವ್ಯವಸ್ಥೆ ಅರ್ಥವಾಗುತ್ತದೆಯೇ ? : ಪ್ರತಾಪ್ ಸಿಂಹ

0

ಮೈಸೂರು(Mysuru): ಮೈಸೂರಿನ ಯಾವುದೋ ತಾಲ್ಲೂಕು ಕೋರ್ಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ದೇಶದ ಆರ್ಥಿಕತೆ ಹೇಗೆ ಅರ್ಥವಾಗುತ್ತದೆ? ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರ ಕರ್ನಾಟಕದಿಂದ ₹19 ಲಕ್ಷ ಕೋಟಿ ದೋಚಿ ₹1.29 ಲಕ್ಷ ಕೋಟಿ ಟಿಪ್ಸ್ ಕೊಟ್ಟಿದೆ ಎಂಬ ಸಿದ್ದರಾಮಯ್ಯ ಟೀಕೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಹೇಗೆ ಎಂಬುದು ಬಿಎ, ಎಲ್‌ಎಲ್‌ಬಿ ಓದಿದವರಿಗೆ ಅರ್ಥವಾಗುವಂತಿದ್ದರೆ ಈ ರೀತಿ ಅಸಂಬದ್ಧವಾಗಿ ಮಾತನಾಡುತ್ತಿರಲಿಲ್ಲ ಎಂದರು.

ಕೇಂದ್ರ ಸರ್ಕಾರ ₹32ಕ್ಕೆ ಕೆ.ಜಿ ಅಕ್ಕಿ ಖರೀದಿಸಿ ರಾಜ್ಯಕ್ಕೆ ₹3ಕ್ಕೆ ನೀಡುತ್ತಿತ್ತು. ಉಳಿದ ₹29 ಅನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಈ ₹3ರಲ್ಲಿ ₹2 ಕಡಿಮೆ ಮಾಡಿ ಅಕ್ಕಿ ಕೊಟ್ಟು, ಅಕ್ಕಿ, ಎಣ್ಣೆ, ಉಪ್ಪಿನ ಪಾಕೇಟ್‌ ಮೇಲೆ ಬೋರ್ಡ್‌ ಹಾಕಿಕೊಂಡರಲ್ಲಾ? ಅಕ್ಕಿಗೆ ₹29 ಕೊಟ್ಟಿದ್ದು ಯಾರು? ಇಲ್ಲಿಂದ ಹೋದ ತೆರಿಗೆ ಹಣದಲ್ಲಿ ತಾನೆ ಈ ಹಣ ನೀಡಿರುವುದು? ದೇಶದಾದ್ಯಂತ ಯೋಧರು, ಕೇಂದ್ರ ಸರ್ಕಾರಿ ನೌಕರರು, ರಾಜತಾಂತ್ರಿಕ ಕಚೇರಿ ನೌಕರರಿಗೆ ಸಂಬಳ, ಸವಲತ್ತು ಯಾರು ನೀಡುತ್ತಾರೆ? ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ, ಉಜ್ವಲ ಯೋಜನೆಯಡಿ 10 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ, ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ಉಚಿತವಾಗಿ ಪಡಿತರ ನೀಡಿದ್ದು ಯಾವ ಹಣದಿಂದ ಎಂದು ಪ್ರಶ್ನಿಸಿದರು.

13 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಲೆಕ್ಕಾಚಾರದ ಕನಿಷ್ಠ ಜ್ಞಾನ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಅವರು ಮೋದಿಗೆ ಪಾಠ ಮಾಡುವುದು ಬೇಕಿಲ್ಲ. ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು ಸದಾನಂದಗೌಡ, ಜಗದೀಶ್‌ ಶೆಟ್ಟರ್‌ವರೆಗೆ ಇದ್ದ ರಾಜ್ಯದ ಸಾಲವನ್ನು ಒಮ್ಮೆಲೆ ದ್ವಿಗುಣ ಮಾಡಿದವರು ಸಿದ್ದರಾಮಯ್ಯ. ಅವರ ಲೆಕ್ಕಾಚಾರದ ಜ್ಞಾನವನ್ನು ನಾವು ತಿಳಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.