ಬೀದರ್: ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯ ಕಂಡಿರುವುದು ಸಿದ್ದರಾಮಯ್ಯನವರದ್ದು. ಕಡುಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರದ್ದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರ್’ನ ಹುಮನಾಬಾದ್’ನಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ಭ್ರಷ್ಟರು ಎನ್ನುವ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಮೋದಿ ಬಗ್ಗೆ ಖರ್ಗೆ ಅವರು ಕೆಟ್ಟ ಪದ ಬಳಸಿ ಟೀಕಿಸಿದರು. ಮೋದಿ ಎಂದರೆ ಕಾಂಗ್ರೆಸ್ಗೆ ಸೋಲು ಎಂದೇ ಅರ್ಥ. ಕಾಂಗ್ರೆಸ್ ನಾಯಕರು ಹತಾಶೆಯಿಂದ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ವಿಷವನ್ನು ಕುಡಿದು ಜನರಿಗೆ ಒಳಿತನ್ನು ಮಾಡುವ ನಾಯಕ ಮೋದಿ ಎಂದು ಬಣ್ಣಿಸಿದರು.
ಬಳಿಕ ಸರ್ಕಾರ ಸಾಧನೆಗಳ ಕುರಿತು ಮಾತನಾಡಿದ ಅವರು, ಕರ್ನಾಟಕಕ್ಕೆ 17 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದು ನರೇಂದ್ರ ಮೋದಿಯವರು. ಒಂದೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 12 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎರಡೂವರೆ ಲಕ್ಷ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಡಬಲ್ ಎಂಜಿನ್ ಸರ್ಕಾರದಿಂದ ಗಮನಾರ್ಹ ಸಾಧನೆ ಮಾಡಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಕಲಬುರಗಿಯ ಮೆಗಾ ಟೆಕ್ಸ್ಟೈಲ್ ಪಾರ್ಕ್’ನಿಂದಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಗೆ ಹೆಚ್ಚಿನ ಕೊಡುಗೆ ನೀಡಿದ ಧೀಮಂತ ನಾಯಕ ಮೋದಿಯವರು ಎಂದು ತಿಳಿಸಿದರು.














