ಮೈಸೂರು: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ.
ವರುಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಕಳೆದ 15 ವರ್ಷಗಳಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಾರೆ. ವರುಣಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ನಂತರ ಕಳೆದ ಬಾರಿ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ಈಗ ಶಾಸಕರಾಗಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಅವರು ತಂದೆಗೆ ಮತ್ತೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಾದ ನಂತರ ಒಂದು ದಿನ 16 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಮತ್ತೆ ಎರಡು ದಿನ ಪ್ರಚಾರಕ್ಕೆ ಆಗಮಿಸುತ್ತೇನೆ ಎಂದು ಹೇಳಿದ್ದಾರೆ.
ಈ ವರೆಗೆ ಸಿದ್ದು ಕುಟುಂಬದಲ್ಲಿ ಗಂಡು ಮಕ್ಕಳನ್ನು ಬಿಟ್ಟರೆ ಅವರ ಪತ್ನಿ ಹಾಗೂ ಸೊಸೆ ಎಂದೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಮೊದಲ ಬಾರಿಗೆ ಮಾವನ ಪರವಾಗಿ ರಾಕೇಶ್ ಸಿದ್ದರಾಮಯ್ಯ ಪತ್ನಿ ಸ್ಮಿತಾ ರಾಕೇಶ್ ವರುಣಾ ಕ್ಷೇತ್ರದ ತಾಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮನೆ ಮನೆಗೆ ಹೋಗಿ, ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಮತ್ತೆ ಮಾವ ಸಿಎಂ ಆಗುತ್ತಾರೆ, ತಾವು ದಯವಿಟ್ಟು ಮತ ನೀಡಿ ಎಂದು ವಿನಂತಿ ಮಾಡುತ್ತಿದ್ದಾರೆ.