ಮನೆ ರಾಜ್ಯ ಸಿದ್ದರಾಮೋತ್ಸವ ಆಚರಣೆ: ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ- ಬಿಜೆಪಿ ವಾಗ್ದಾಳಿ

ಸಿದ್ದರಾಮೋತ್ಸವ ಆಚರಣೆ: ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ- ಬಿಜೆಪಿ ವಾಗ್ದಾಳಿ

0

ಬೆಂಗಳೂರು(Bengaluru): ನಾಡಿನಾದ್ಯಂತ ಕಂಡು ಕೇಳರಿಯದ ಮಳೆಯಾಗಿ ಅಪಾರ ಸಾವು-ನೋವುಗಳುಂಟಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವೇ ಮುಂದೆ ನಿಂತು ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯ ವೈಭವೀಕರಣವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರ ರಾಜಕೀಯ ಜೀವನದ ಅಂತ್ಯ ಹೇಗಾಯಿತು ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಎಚ್ಚರಿಕೆಯ ಕರೆಗಂಟೆಯಿದು ಎಂದು ತಿಳಿಸಿದೆ.

75 ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ನಕಲಿ ಗಾಂಧಿ ಕುಟುಂಬ ಹೊರತುಪಡಿಸಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿಗರಿಂದ ಬೇರೊಬ್ಬ ವ್ಯಕ್ತಿಯ ‘ವ್ಯಕ್ತಿಪೂಜೆ’ ನಡೆಸುವಂತೆ ಮಾಡಿದ ಸಿದ್ದರಾಮಯ್ಯ ಅವರ ಹಠಕ್ಕೂ ಅಭಿನಂದನೆಗಳು ಎಂದು ವ್ಯಂಗ್ಯವಾಡಿದೆ.

ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡೆವು ಎಂಬ ಕಾರಣಕ್ಕೆ ನಾವು ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ್ದೇವೆ. ಆದರೆ, ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟಾಗಲೂ ಕಾಂಗ್ರೆಸ್‌ ಕೇಕ್‌ ಕತ್ತರಿಸಿಕೊಂಡು ಸಂಭ್ರಮಿಸುತ್ತಿದೆ. ಕಾರ್ಯಕರ್ತನ ಸಾವಿಗೂ ಇಲ್ಲಿ ಬೆಲೆಯಿಲ್ಲ ಎಂದು ಬಿಜೆಪಿ ಟೀಕಿಸಿದೆ.