ಮನೆ ಸುದ್ದಿ ಜಾಲ ಸ್ಪರ್ಧಾತ್ಮಕ ಪರೀಕ್ಷೆಗೆ ಪತ್ರಿಕೆಗಳೇ ಜ್ಞಾನ ಸಂಪನ್ಮೂಲ: ಮೈಸೂರು ವಿವಿ ಕುಲಸಚಿವೆ ವಿ.ಆರ್ ಶೈಲಜಾ

ಸ್ಪರ್ಧಾತ್ಮಕ ಪರೀಕ್ಷೆಗೆ ಪತ್ರಿಕೆಗಳೇ ಜ್ಞಾನ ಸಂಪನ್ಮೂಲ: ಮೈಸೂರು ವಿವಿ ಕುಲಸಚಿವೆ ವಿ.ಆರ್ ಶೈಲಜಾ

0

ಮೈಸೂರು(Mysuru): ಸ್ಪರ್ಧಾತ್ಮಕ ಪರೀಕ್ಷೆಗೆ ಪತ್ರಿಕೆಗಳೇ ಜ್ಞಾನ ಸಂಪನ್ಮೂಲವಾಗಿವೆ. ಹಾಗಾಗಿ, ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ವಿ.ಆರ್.ಶೈಲಜಾ ಹೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯ ವತಿಯಿಂದ ಮೈಸೂರು ವಿವಿ ಸಂಜೆ ಕಾಲೇಜು ಮುಂಭಾಗ ಶನಿವಾರ ರಾಜಶೇಖರ ಕೋಟಿ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದಲಿತ, ಶೋಷಿತ, ಬಡವರ ಮತ್ತು ಸಮಾಜ ಪರವಾದ ಮನೋಧರ್ಮವನ್ನು ಎತ್ತಿಹಿಡಿಯುವ ಮೂಲಕ ರಾಜಶೇಖರ ಕೋಟಿ ಮತ್ತು ‘ಆಂದೋಲನ’ ದಿನಪತ್ರಿಕೆ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದುಕೊಂಡಿದೆ ಎಂದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಬಿ.ಆರ್.ಪೂರ್ಣಿಮಾ ಮಾತನಾಡಿ, ರಾಜಶೇಖರ ಕೋಟಿ ಅವರು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪನ ನುಡಿಯಂತೆ ಬದುಕಿದವರು. ನಮ್ಮ ತಂದೆಯೂ ಇದರಲ್ಲಿ ನಂಬಿಕೆ ಇಟ್ಟು ಬದುಕಿದವರು.

ರಾಜಶೇಖರ ಕೋಟಿ ಮತ್ತು ನಮ್ಮ ತಂದೆ ಬೆಸರಗರಹಳ್ಳಿ ರಾಮಣ್ಣ ಅವರ ನಡುವೆ ಒಳ್ಳೆಯ ಒಡನಾಟವಿತ್ತು. ನಮ್ಮ ತಂದೆಯ ‘ಗಾಂಧಿ’ ಕತೆ ಮೊದಲು ಪ್ರಕಟವಾಗಿದ್ದು,‘ಆಂದೋಲನ’ ದಿನಪತ್ರಿಕೆಯಲ್ಲಿ ಎಂದು ತಿಳಿಸಿದರು.

ಸಮಾಜಮುಖಿಯಾಗಿ ಕೆಲಸ ಮಾಡಿದ ಕೋಟಿ ಅವರು, ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಎಲ್ಲ ಪತ್ರಕರ್ತರಿಗೂ ಇವರು ಪ್ರೇರಣೆಯಾಗಬೇಕು ಎಂದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ರಾಜಶೇಖರ ಕೋಟಿ ಅವರು ತಾವು ಸಂಪಾದನೆ ಮಾಡಿ ಶೇ.೬೦ರಷ್ಟು ಭಾಗವನ್ನು ಸಮಾಜಕ್ಕೆ ನೀಡಿದ್ದಾರೆ. ಅವರು ಸಮಾಜದಿಂದ ಪಡೆದುಕೊಂಡಿದ್ದಕ್ಕಿಂತ, ಸಮಾಜಕ್ಕೆ ನೀಡಿದ್ದೇ ಹೆಚ್ಚು. ತಾವು ನಂಬಿದ್ದ ತತ್ವ-ಸಿದ್ದಾಂತಗಳಿಗೆ ಅಂಟಿಕೊಂಡೆ ನಡೆದ ಕೋಟಿ ಅವರು ವಿಶ್ವಕುಟುಂಬ ಎಂದರು.

ರಾಜಶೇಖರ ಕೋಟಿ ಅವರ ಸ್ಮರಣಾರ್ಥವಾಗಿ ಪತ್ರಕರ್ತರಾದ ರವಿಕುಮಾರ್, ಎಚ್.ಎಸ್.ದಿನೇಶ್ ಕುಮಾರ್, ರವಿಚಂದ್ರ, ಬೀರೇಗೌಡ, ರವಿ ಪಾಂಡವಪುರ, ಎಂ.ರಾಜೇಶ್, ಆರ್.ಗಣೇಶ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಾನಸಗಂಗೋತ್ರಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಎಚ್.ಪಿ.ಜ್ಯೋತಿ, ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧ, ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್, ಪ್ರೊ.ಮಹದೇವಮೂರ್ತಿ, ವೇದಿಕೆಯ ಅಧ್ಯಕ್ಷ ಆರ್.ವಾಸುದೇವ್, ಡಾ.ದಿನಮಣಿ, ಪ್ರೊ.ರಮೇಶ್ ಬಾಬು ಸೇರಿದಂತೆ ವೇದಿಕೆಯ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಇತರರು ಹಾಜರಿದ್ದರು.

ಹಿಂದಿನ ಲೇಖನ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ  ನಟಿ ಸಪ್ತಮಿ ಗೌಡ
ಮುಂದಿನ ಲೇಖನನ್ಯೂಜಿಲೆಂಡ್ ವಿರುದ್ಧ T20 ಸರಣಿ: ಭಾರತ ತಂಡದಲ್ಲಿ ಕೊಹ್ಲಿ, ರೋಹಿತ್‌’ಗಿಲ್ಲ ಸ್ಥಾನ