ಸಾಗರ: ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟೆಯ ಶರಾವತಿ ಹಿನ್ನೀರಿನ ತುಮರಿ ಸಿಗಂದೂರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದ ಸಿಗಂದೂರು ಲಾಂಚ್‌ನಲ್ಲಿ ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕರು ತಿಳಿಸಿದ್ದಾರೆ.
ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ನಡೆಸಿದ ವೇಳೆಯಲ್ಲಿ ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು ಲಾಂಚ್‌ನಲ್ಲಿ ಸಾಗಿಸುವುದು ಕಷ್ಟವಾಗಲಿದೆ ಎಂಬುದು ಅರಿವಿಗೆ ಬಂದಿದೆ. ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಸಾಗರ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಮೇಲೆ ಪೂರ್ಣ ಪ್ರಮಾಣದಲ್ಲಿ ಲಾಂಚ್ ಸೇವೆಯನ್ನು ನಿರ್ವಹಿಸಲಾಗುತ್ತದೆ ಎಂದು ಜಲಸಾರಿಗೆ ಮಂಡಳಿ ತಿಳಿಸಿದೆಯಾದರೂ ಮುಂದಿನ ೧೫ ದಿನಗಳಲ್ಲಿ ಮತ್ತೆ ವಾಹನಗಳ ಸಾಗಾಣಿಕೆ ಸಾಧ್ಯತೆ ಕ್ಷೀಣಿಸಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಿಂದ ಆರಂಭವಾಗುವ ಮಾನ್ಸೂನ್ ಮಳೆಗಾಲ ಒಂದೆರಡು ದಿನ ಮಳೆ ಸುರಿಸಿರುವುದನ್ನು ಬಿಟ್ಟರೆ ಈಗ ದುರ್ಬಲವಾಗಿದೆ.
ಹವಾಮಾನ ವರದಿಯ ಪ್ರಕಾರ ಜೂನ್ ತಿಂಗಳ ಕೊನೆಯ ಹಂತದಲ್ಲಿಯಷ್ಟೇ ಮಳೆ ಮತ್ತೊಮ್ಮೆ ಹೆಚ್ಚಾಗಬಹುದು ಎನ್ನಲಾಗಿದೆ. ಬಿರುಸಿನ ಮಳೆ ಒಂದೆರಡು ದಿನ ಹೊಯ್ಯದೆ ಶರಾವತಿ ಹಿನ್ನೀರಿನ ನೀರಿನ ಮಟ್ಟ ಏರುವ ಸಾಧ್ಯತೆ ಅತ್ಯಂತ ಕಡಿಮೆ ಇದೆ.