ಹಲವು ವರ್ಷಗಳ ಹಿಂದೆ ಕಾಲಿವುಡ್‌ನಲ್ಲಿ ‘ವಿಕ್ರಂ ವೇದ’ ಎಂಬ ಸಿನಿಮಾ ತೆರೆಕಂಡಿತ್ತು. ಶರಣಾದ ಆರೋಪಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬ ವಿಚಾರಣೆ ನಡೆಸುವಲ್ಲಿಂದ ಆ ಚಿತ್ರದ ಕಥೆ ತೆರೆದುಕೊಳ್ಳಲಾರಂಭಿಸುತ್ತದೆ. ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ ಕೂಡಾ ಇದೇ ಜಾನರ್‌ನಲ್ಲಿದೆ. ಆದರೆ ಇದು ರಿಮೇಕ್ ಅಲ್ಲ. ಕುತೂಹಲಕಾರಿಯಾದ ಒಂದು ಭಿನ್ನ ಕಥೆಯುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಸಾಗರ್ ಕುಮಾರ್ ಕೊಟ್ಟಿದ್ದಾರೆ. ಆ ಕಥೆಯಲ್ಲಿ ಕಿಶೋರ್ ಕುಮಾರ್ ಜೀವಿಸಿದ್ದಾರೆ.
ಪ್ರಜ್ಞೆತಪ್ಪಿ ಬಿದ್ದ ಪತ್ರಕರ್ತ ಪ್ರವೀಣ್ ರಾಜಶೇಖರ್ ಎದ್ದುನೋಡುವಾಗ, ಆತ ಸಂದರ್ಶನ ಮಾಡಲು ಬಂದಿದ್ದ ಖ್ಯಾತ ಕ್ರಿಮಿನಲ್ ವಕೀಲ ಆನಂದ್ ಭಟ್ ಕೊಲೆಯಾಗಿದೆ. ಆನಂದ್ ಭಟ್ ಮನೆಯಲ್ಲಿ ಇನ್ಯಾರೋ ಇರುವ ಅನುಮಾನ. ಆತ್ಮರಕ್ಷಣೆಗಾಗಿ ಆ ವ್ಯಕ್ತಿಯನ್ನು ಪ್ರವೀಣ್ ಕೊಲ್ಲುತ್ತಾನೆ. ಪೊಲೀಸರೆದುರು ಶರಣಾಗುವ ಪ್ರವೀಣ್ ಸಂತ್ರಸ್ತನೋ, ಆರೋಪಿಯೋ ಅಥವಾ ಸಾಕ್ಷಿಯೋ ಎನ್ನುವುದು ಚಿತ್ರದ ಮುಂದಿನ ಕಥೆ.
ಈ ಚಿತ್ರದ ಕಥೆಗೆ ಹಲವು ದೃಷ್ಟಿಕೋನ, ತಿರುವುಗಳಿವೆ. ಅದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಸಿನಿಮಾದ ಶೀರ್ಷಿಕೆಯಷ್ಟೇ ಕುತೂಹಲಕಾರಿಯಾಗಿ ಚಿತ್ರದ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊತ್ತ ಈ ಸಿನಿಮಾವನ್ನು ಅನನುಕ್ರಮಣಿಕೆ ಮಾದರಿಯ ಚಿತ್ರಕಥೆಯಲ್ಲಿ ಕಟ್ಟಿಕೊಡಲಾಗಿದೆ. ಈ ಮಾದರಿ ಕುತೂಹಲ ಹುಟ್ಟಿಸುವಂತಿದೆ. ಸಿನಿಮಾದ ಅವಧಿ 104 ನಿಮಿಷವಿದ್ದು, ಎಲ್ಲೂ ಎಳೆದಾಡದೆ ಚೊಕ್ಕವಾಗಿ ಕಟ್ಟಿಕೊಟ್ಟಿದ್ದಾರೆ ಸಾಗರ್. ಅನಗತ್ಯ ಸನ್ನಿವೇಶಗಳನ್ನು ಸೃಷ್ಟಿಸದೆ ಒಂದು ಚೌಕಟ್ಟಿನಲ್ಲಿ ಕಥೆ ಹೇಳಿದ್ದಾರೆ. ಚಿತ್ರೀಕರಣ ನಡೆಸಿದ ಸ್ಥಳವೂ ಸೀಮಿತವಾಗಿದೆ. ಚೊಚ್ಚಲ ನಿರ್ದೇಶನದಲ್ಲೇ ವೀಕ್ಷಕರನ್ನು ಸೆಳೆದಿಟ್ಟುಕೊಳ್ಳಬಲ್ಲ ಅಂಶಗಳನ್ನು ಅವರು ಅರಿತಿದ್ದಾರೆ. ಸಿನಿಮಾದಲ್ಲಿ ಸಂಭಾಷಣೆಯೇ ಪ್ರಮುಖ ಪಾತ್ರ ವಹಿಸಿದ್ದು, ಕಿಶೋರ್ ಹಾಗೂ ಹರ್ಷಿಲ್ ನಡುವಿನ ವಿಚಾರಣೆ ದೃಶ್ಯ ಸಿನಿಮಾದ ಕೇಂದ್ರ ಬಿಂದು. ಅಲ್ಲಿನ ಪ್ರಶ್ನೆ ಹಾಗೂ ಪ್ರತ್ಯುತ್ತಗಳ ಮೇಲೆಯೇ ಚಿತ್ರದ ಕಥೆ ನಿಂತಿದೆ. ಕ್ಲೈಮ್ಯಾಕ್ಸ್ ಬರವಣಿಗೆ ನಿರ್ದೇಶಕರ ಮೇಲೆ ಭರವಸೆ ಮೂಡಿಸುತ್ತದೆ.
ಮಲಯಾಳ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನಲ್ಲಿ ಹಲವು ಪ್ರಯೋಗಗಳು ನಡೆಯುತ್ತಿವೆ. ಇವುಗಳ ಪೈಕಿ ಈ ಸಿನಿಮಾ ಭಿನ್ನವಾಗಿ ನಿಲ್ಲುತ್ತದೆ. ಸಿನಿಮಾದಲ್ಲಿರುವುದು ಬೆರಳೆಣಿಕೆಯಷ್ಟೇ ಪಾತ್ರಗಳು. ಕಿಶೋರ್ ಹಾಗೂ ಹರ್ಷಿಲ್ ನಡುವಿನ ವಿಚಾರಣೆಯ ಜುಗಲ್‌ಬಂದಿ ಪತ್ರಿಕೋದ್ಯಮ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿನ ಹಲವು ವಾಸ್ತವಗಳನ್ನು ಬಿಚ್ಚಿಟ್ಟಿದೆ. ಇವರಿಬ್ಬರ ಸುತ್ತಲೇ ಹೆಚ್ಚಿನ ಕಥೆಯಿದ್ದು, ಆ ಪಾತ್ರಗಳನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅನಾಮಧೇಯನನ್ನು ಕೊನೆಯ ಹಂತದವರೆಗೂ ಅನಾಮಧೇಯನಾಗಿ ಉಳಿಸಿಕೊಳ್ಳುವಲ್ಲಿ ಕಥೆ ಯಶಸ್ವಿಯಾಗಿದೆ. ಚಿತ್ರದ ಹಿನ್ನೆಲೆ ಸಂಗೀತದ ಬಗ್ಗೆ ಇನ್ನಷ್ಟು ಗಮನಹರಿಸಿದ್ದರೆ ಉತ್ತಮವಿತ್ತು.