ಸಿಕ್ಕಿಂ: ಸಿಕ್ಕಿಂನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನವವಿವಾಹಿತ ದಂಪತಿಯನ್ನು ಸೇರಿಸಿ ಒಟ್ಟು 9 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಲಾಚೆನ್‌ನಿಂದ ಲಾಚುಂಗ್ ಕಡೆಗೆ ಹೋಗುತ್ತಿದ್ದ ಪ್ರವಾಸಿಗರ ವಾಹನವು ನಿಯಂತ್ರಣ ತಪ್ಪಿ ತೀಸ್ತಾ ನದಿಗೆ ಉರುಳಿದ್ದು, ಈ ದುರಂತ ಸಂಭವಿಸಿದೆ.
ನಾಪತ್ತೆಯಾದವರ ಪೈಕಿ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ನಿವಾಸಿಗಳಾದ ಕೌಶಲೇಂದ್ರ ಪ್ರತಾಪ್ ಸಿಂಗ್ (29) ಮತ್ತು ಅವರ ಪತ್ನಿ ಅಂಕಿತಾ ಸಿಂಗ್ (26) ಈ ದಂಪತಿಯು. ಮೇ 5 ರಂದು ಈ ಜೋಡಿ ವಿವಾಹವಾಗಿ ಮೇ 25ರಂದು ಹನಿಮೂನ್‌ಗೆ ಸಿಕ್ಕಿಂಗೆ ಪ್ರಯಾಣ ಬೆಳೆಸಿದ್ದರು. ಮೇ 29ರಂದು ಲಾಚೆನ್‌ನಿಂದ ಹಿಂತಿರುಗುವಾಗ ಭಾರೀ ಮಳೆಯ ಕಾರಣ ವಾಹನದ ಚಾಲಕ ನಿಯಂತ್ರಣ ತಪ್ಪಿದ್ದು, ವಾಹನ ನದಿಗೆ ಪಲ್ಟಿಯಾಗಿದೆ.
ವಾಹನದಲ್ಲಿ ಈ ದಂಪತಿಯ ಜೊತೆಗೆ ಉಳಿದ ಏಳು ಪ್ರವಾಸಿಗರು ಇದ್ದರು. ಅವರಲ್ಲಿ ಇಬ್ಬರು ಉತ್ತರ ಪ್ರದೇಶದವರು, ಇಬ್ಬರು ತ್ರಿಪುರಾ ರಾಜ್ಯದವರು ಮತ್ತು ನಾಲ್ವರು ಒಡಿಶಾ ಮೂಲದವರು ಜೊತೆಗೆ ಚಾಲಕನೂ ಸೇರಿ ಎಲ್ಲರೂ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಎಲ್ಲಾ ಜನರು ಈವರೆಗೆ ನಾಪತ್ತೆಯಾಗಿದ್ದು, ಸ್ಥಳೀಯ ಆಡಳಿತ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಈ ಘಟನೆ ಸಂಬಂಧಿಸಿದಂತೆ ಕೌಶಲೇಂದ್ರ ಪ್ರತಾಪ್ ಸಿಂಗ್ ಅವರ ಕುಟುಂಬದ ಸದಸ್ಯರು, ಜಿಲ್ಲಾಧಿಕಾರಿ ಅಕ್ಷಯ್ ಸಚ್‌ದೇವ್ ಮತ್ತು ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಶೋಧ ಕಾರ್ಯಾಚರಣೆ ವೇಗಗೊಳಿಸುವಂತೆ ಮನವಿ ಮಾಡಿದ್ದಾರೆ. ಇನ್ನು, ಈ ಘಟನೆಯ ಬಗ್ಗೆ ಮಾಹಿತಿ ನೀಡಿದ ಕೌಶಲೇಂದ್ರ ಅವರ ಚಿಕ್ಕಪ್ಪ ದಿನೇಶ್ ಸಿಂಗ್ ಅವರು, “ಈವರೆಗೆ ಯಾವುದೇ ಮೃತದೇಹ ಅಥವಾ ಬದುಕುಳಿದವರು ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ” ಎಂದು ಹೇಳಿದ್ದಾರೆ.














