ಒಂದು ಚೆಕ್ ತನ್ನ ಮುಖದಲ್ಲಿ ನಮೂದಿಸಿದ ದಿನಾಂಕದಿಂದ ಮೂರು ತಿಂಗಳ ವರೆಗೆ ಮೌಲ್ಯತೆ ಹೊಂದಿರುತ್ತದೆ. ಆ ಮೂರು ತಿಂಗಳಲ್ಲಿ ಚೆಕ್‌ನ್ನು ನಗದೀಕರಣಗೊಳಿಸಲು ಎಷ್ಟು ಬಾರಿ ಬೇಕಾದರೂ ಬ್ಯಾಂಕ್‌ಗೆ ಪ್ರೆಸೆಂಟ್ ಮಾಡಬಹುದು.
ಪ್ರತಿ ಬಾರಿಯೂ ಚೆಕ್ಕ ನಗದೀಕರಣಗೊಳ್ಳದೆ ಅಮಾನ್ಯಗೊಂಡಾಗ ನೆಗೋಷಿಯೆಬಲ್ ಇನ್ಸ್ ಟ್ರುಮೆಂಟ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಬಹುದು.
ಹೀಗೆ, ಒಂದೇ ಚೆಕ್ ಹಲವು ಬಾರಿ ಅಮಾನ್ಯಗೊಂಡಾಗ ವ್ಯಾಜ್ಯ ಕಾರಣ ಯಾವುದು..? ಯಾವ ದಿನಾಂಕದ ಪ್ರಕಾರ ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಬಹುದು ಎಂಬ ಗೊಂದಲ ಉಂಟಾಗುವುದು ಸಹಜ. ಇದಕ್ಕೆ ಹೈಕೋರ್ಟ್ ಇತ್ತೀಚಿನ ತೀರ್ಪು ಬೆಳಕು ಚೆಲ್ಲಿದೆ.
ಚೆಕ್ ಅನ್ನು ಅದರ ಸಿಂಧುತ್ವದೊಳಗೆ ಹಲವಾರು ಬಾರಿ ಬ್ಯಾಂಕ್‌ಗೆ ಪ್ರಸ್ತುತಪಡಿಸಿದರೆ, ಕೊನೆಯ ಬಾರಿಗೆ ಚೆಕ್ ಅಮಾನ್ಯಗೊಂಡ ದಿನವೇ ವ್ಯಾಜ್ಯ ಕಾರಣ ಉಂಟಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಗೌತಮ್ ಭಾದುರಿ ಅವರಿದ್ದ ಛತ್ತೀಸ್‌ಗಢ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಮಂಜಿತ್ ಸಿಂಗ್ ಧಿಲ್ಲನ್ ಎಂಬವರು ಬಲ್ಜಿಂದರ್ ಸಿಂಗ್ ರಾಜ್‌ಪಾಲ್ ಎಂಬವರಿಗೆ ಸಾಲ ಮರುಪಾವತಿಯಾಗಿ ನೀಡಲಾದ ಚೆಕ್ ಅಮಾನ್ಯವಾಗಿತ್ತು. ಈ ಬಗ್ಗೆ ಬಲ್ಜಿಂದರ್ ಎನ್.ಐ. ಕಾಯ್ದೆ ಪ್ರಕಾರ ಕೇಸು ದಾಖಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಮಂಜಿತ್ ಸಿಂಗ್ ಧಿಲ್ಲನ್ ಅವರನ್ನು ಸೆಕ್ಷನ್ 138 ರ ಅಡಿಯಲ್ಲಿ ದೋಷಿ ಎಂದು ವಿಚಾರಣಾ ನ್ಯಾಯಾಲಯ ಘೋಷಿಸಿತ್ತು.
ಈ ಪ್ರಕರಣದಲ್ಲಿ ಚೆಕ್ ಅನ್ನು ಅದರ ಸಿಂಧುತ್ವದ ಅವಧಿಯೊಳಗೆ ಅನೇಕ ಬಾರಿ ಪ್ರೆಸೆಂಟ್ ಮಾಡಲಾಯಿತು. ಪ್ರತಿ ಬಾರಿಯೂ ಅದು ನಗದೀಕರಣಗೊಳ್ಳದೆ ಅಮಾನ್ಯಗೊಂಡಿತು. ವ್ಯಾಜ್ಯ ಕಾರಣದ ಅವಧಿಯ ಸುತ್ತ ಮತ್ತು ಎನ್.ಐ. ಕಾಯ್ದೆಯ ಅಡಿಯಲ್ಲಿ ನೋಟೀಸ್ ನ ಅಗತ್ಯತೆಯ ವ್ಯಾಖ್ಯಾನದ ಬಗ್ಗೆ ಈ ಪ್ರಕರಣದ ವಿವಾದ ಸುತ್ತಿಕೊಂಡಿತು.
ಬ್ಯಾಂಕ್ ಖಾತೆಗೆ ಚೆಕ್ ನ್ನು ನಗದೀಕರಣಕ್ಕೆ ಎಷ್ಟು ಬಾರಿ ಪ್ರಸ್ತುತಪಡಿಸಿದರೂ, ಕೊನೆಯ ಅವಧಿಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಎನ್‌ಐ ಕಾಯ್ದೆಯ ವ್ಯಾಜ್ಯ ಕಾರಣ ಉದ್ಘವಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಕಮಲೇಶ್ ಕುಮಾರ್ Vs ಬಿಹಾರ ರಾಜ್ಯ ಮತ್ತು ಸೋಮನಾಥ್ ಸರ್ಕಾರ್ Vs ಉತ್ಪಲ್ ಬಸು ಮಲ್ಲಿಕ್ ಮತ್ತೊಬ್ಬರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಮುಂದುವರಿದ ಹಾಗೂ ಕೊನೆಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಕಾನೂನು ಪ್ರಕರಣವನ್ನು ನಡೆಸಬಹುದು ಎಂದು ಹೇಳಿತು.
ಕಾಯಿದೆಯ(NI Act) ಸೆಕ್ಷನ್ 94 ರ ಅವಶ್ಯಕತೆಗಳನ್ನು ಪೂರೈಸುವ ಅಂಚೆ ಮೂಲಕ ಕಳುಹಿಸಲಾದ ನೋಟೀಸ್ ಹಿಂತಿರುಗಿಸಲ್ಪಟ್ಟಾಗ, ಅದನ್ನು ಡೀಮ್ಡ್ ಸೇವೆಯ ಶಾಸನಬದ್ಧ ಊಹೆಗೆ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಹೇಳಿತು. ಈ ಪ್ರಕರಣದಲ್ಲಿ (Doors are closed) ಎಂಬ ಹಿಂಬರಹದೊಂದಿಗೆ ನೋಟಿಸ್ ವಾಪಸ್ ಮಾಡಲಾಗಿತ್ತು.
ಪ್ರಕರಣ: ಮನ್‌ಜೀತ್ ದಿಲ್ಲನ್ Vs ಬಲ್ಜಿಂದರ್ ಸಿಂಗ್ ರಾಜ್‌ಪಾಲ್ ಛತ್ತೀಸ್‌ಗಢ ಹೈಕೋರ್ಟ್