ಮುಂಬೈ(Mumbai): 58ನೇ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ 2022’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
2020ರ ‘ಮಿಸ್ ಇಂಡಿಯಾ’ ಮಾನಸಾ ವಾರಾಣಸಿ ಅವರು ಸಿನಿ ಶೆಟ್ಟಿಗೆ ಕಿರೀಟವಿರಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತ್ತಿಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
21 ವರ್ಷದ ಶಿನಾತಾ ಚೌಹಾಣ್ ಸೌಂದರ್ಯ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆದರು. ರೂಬಲ್ ಶೇಖಾವತ್ ಅವರನ್ನು ಮೊದಲ ರನ್ನರ್ ಅಪ್ ಎಂದು ಘೋಷಿಸಲಾಯಿತು.
‘ಕಾಂತಿಯುತ, ಮೋಡಿ ಮಾಡುವ ಸೌಂದರ್ಯದಿಂದ ಸಿನಿ ಶೆಟ್ಟಿ ನಮ್ಮ ಹೃದಯ ಗೆದ್ದಿದ್ದಾರೆ. ನಾವು ಬಹಳ ಹೆಮ್ಮೆಪಡುತ್ತೇವೆ. ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಮಿಸ್ ಇಂಡಿಯಾದ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಲಾಗಿದೆ.
ಅಂತಿಮ ಸುತ್ತಿನ ಸ್ಪರ್ಧೆಯು ಜುಲೈ 03 ರಂದು ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಾಲಿವುಡ್ ಕಲಾವಿದರಾದ ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ಮಲೈಕಾ ಅರೋರಾ, ಕ್ರಿಕೆಟಿಗ ಮಿಥಾಲಿ ರಾಜ್ ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಿಯಾಮಕ್ ದಾವರ್ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕೃತಿ ಸನೋನ್, ಲಾರೆನ್ ಗಾಟ್ಲೀಬ್, ಮನೀಶ್ ಪಾಲ್, ರಾಜ್‍ಕುಮಾರ್ ರಾವ್ ಸೇರಿದಂತೆ ಹಲವಾರು ನಟ, ನಟಿಯರು ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಭಾಗವಹಿಸಿ ಎಲ್ಲರನ್ನು ರಂಜಿಸಿದರು.