ಮನೆ ಕಾನೂನು ಮೃತ ಸರ್ಕಾರಿ ನೌಕರನ ಸಹೋದರಿಗೆ ಅನುಕಂಪದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ: ಹೈಕೋರ್ಟ್

ಮೃತ ಸರ್ಕಾರಿ ನೌಕರನ ಸಹೋದರಿಗೆ ಅನುಕಂಪದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ: ಹೈಕೋರ್ಟ್

0

ಬೆಂಗಳೂರು: ಅನುಕಂಪದ ಆಧಾರದ ಮೇಲೆ ಮೃತ ನೌಕರನ ಸಹೋದರಿಯನ್ನು ಸರ್ಕಾರಿ ನೌಕರಿಗೆ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದ್ದು,  ಮೇಲ್ಮನವಿಯನ್ನು ವಜಾಗೊಳಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಬೆಸ್ಕಾಂ) ಜೂನಿಯರ್ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ನೌಕರ ಮೃತಪಟ್ಟ ಹಿನ್ನೆಲೆ ಅನುಕಂಪದ ಆಧಾರದ ಮೇಲೆ ತನಗೆ ಉದ್ಯೋಗ ನೀಡುವಂತೆ ಸಹೋದರಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು, ಸಹೋದರಿಗೆ ಅನುಕಂಪದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 2(1)(ಬಿ)ಯನ್ನು ಉಲ್ಲೇಖಿಸಿದ ವಿಭಾಗೀಯ ಪೀಠವು, ಮೃತ ಪುರುಷ ವಿವಾಹಿತ ಸರ್ಕಾರಿ ನೌಕರನ ಮೇಲೆ ಅವಲಂಬಿತರಾಗಿದ್ದ ಪತ್ನಿ, ಮಗ ಮತ್ತು ಮಗಳು (ಅವಿವಾಹಿತ/ ವಿವಾಹಿತ/ ವಿಚ್ಛೇದಿತ/ ವಿಧವೆ) ಹಾಗೂ ಅವರ ಜೊತೆ ವಾಸಿಸುತ್ತಿದ್ದವರಿಗೆ ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಅವಕಾಶ ಇದೆ ಎಂದು ಹೇಳಿದೆ.